ADVERTISEMENT

ಪಾಠ ಕೇಳದೆ ‘ಕಿರು ಪರೀಕ್ಷೆ’ಯ ಸವಾಲು!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:51 IST
Last Updated 22 ಸೆಪ್ಟೆಂಬರ್ 2021, 4:51 IST
ಕಲಬುರ್ಗಿಯ ಸ್ಟೇಷನ್ ಬಜಾರ್‌ನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು
ಕಲಬುರ್ಗಿಯ ಸ್ಟೇಷನ್ ಬಜಾರ್‌ನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು   

ಕಲಬುರ್ಗಿ: ಪದವಿಪೂರ್ವ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮುಗಿಯಲು ಬಂದಿದ್ದು, ಕೆಲ ವಿಷಯಗಳ ಪಠ್ಯ ಬೋಧನೆ ಪೂರ್ಣಗೊಳ್ಳುವ ಮೊದಲೇ ವಿದ್ಯಾರ್ಥಿಗಳು ಕಿರು ಪರೀಕ್ಷೆ ಎದುರಿಸಬೇಕಿದೆ.

ನಗರದ ಸ್ಟೇಷನ್ ಬಜಾರ್‌ನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ 2021–22ನೇ ಸಾಲಿನಲ್ಲಿ ಇದುವರೆಗೂ (ಸೆ.21ರ ತನಕ) 389 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದರಲ್ಲಿ 96 ವಿಜ್ಞಾನ ಹಾಗೂ 55 ವಾಣಿಜ್ಯ ವಿಭಾಗದಲ್ಲಿ ಇದ್ದಾರೆ. ದ್ವಿತೀಯ ವರ್ಷದಲ್ಲಿ ವಿಜ್ಞಾನ–49 ಮತ್ತು ವಾಣಿಜ್ಯ–34 ವಿದ್ಯಾರ್ಥಿಗಳು ಇದ್ದಾರೆ.

‘ಕಾಲೇಜಿನಲ್ಲಿ ಗಣಿತ, ರಾಸಾಯನ ವಿಜ್ಞಾನ, ಅರ್ಥಶಾಸ್ತ್ರ ಮತ್ತು ವಾಣಿಜ್ಯ/ಲೆಕ್ಕಶಾಸ್ತ್ರ ವಿಷಯಗಳ ಖಾಯಂ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ವಾರದಲ್ಲಿ ಮೂರು ದಿನ ಮಾತ್ರ ಬೇರೆ ಕಾಲೇಜುಗಳ ಉಪನ್ಯಾಸಕರಿಂದ ಪ್ರಭಾರ ಸೇವೆ ಪಡೆಯಲಾಗುತ್ತಿದೆ. ಪಠ್ಯವನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಆಗುತ್ತಿಲ್ಲ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪಾಠಕ್ಕೂ ತೀವ್ರ ಹಿನ್ನಡೆ ಆಗುತ್ತಿದೆ’ ಎನ್ನುತ್ತಾರೆ ಪ್ರಾಂಶುಪಾಲರಾದ ಸುಜಾತಾ ಬಿರಾದಾರ.

ADVERTISEMENT

ಕಿರು ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಪಿಯು ಮಂಡಳಿ ಈಗಾಗಲೇ ಸೂಚಿಸಿದೆ. ವರ್ಷದಲ್ಲಿ ನಾಲ್ಕು ಕಿರು ಪರೀಕ್ಷೆಗಳು ಹಾಗೂ ಎರಡು ನಿಯೋಜಿತ ಕಾರ್ಯ ನಡೆಸಬೇಕು. ಒಂದು ವೇಳೆ ಕೋವಿಡ್‌ನಿಂದ ಏಪ್ರಿಲ್‌ನಲ್ಲಿ ವಾರ್ಷಿಕ ಪರೀಕ್ಷೆ ನಡೆಯದೆ ಇದ್ದಲ್ಲಿ, ಈ ಕಿರು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನೇ ಪರಿಗಣಿಸಿ ಅಂತಿಮ ಫಲಿತಾಂಶ ನೀಡಲಿದೆ. ಆನ್‌ಲೈನ್‌ ತರಗತಿಗೆ ಬಹುತೇಕ ವಿದ್ಯಾರ್ಥಿಗಳು ಗೈರಾಗುತ್ತಿದ್ದಾರೆ. ಸಿಬ್ಬಂದಿಯ ಕೊರತೆಯಿಂದ ಭೌತಿಕ ತರಗತಿಗಳ ಪಠ್ಯ ಸಹ ಪೂರ್ಣವಾಗುತ್ತಿಲ್ಲ. ಹೀಗಾಗಿ, ಇದು ಮಕ್ಕಳ ಹಾಗೂ ಕಾಲೇಜು ಫಲಿತಾಂಶದ ಮೇಲೆ ಹೊಡೆತ ಬೀಳಬಹುದು ಎಂಬ ಆತಂಕ ಪ್ರಾಂಶುಪಾಲರದ್ದು.

ಕಲಾ ವಿಭಾಗ ದ್ವಿಗುಣ: ಕಳೆದ ವರ್ಷ 136 ಇದ್ದ ಕಲಾ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಈಗ 238ಕ್ಕೆ ತಲುಪಿದೆ. ಪ್ರವೇಶಾತಿ ನಡೆಯುತ್ತಿದ್ದು, ಇದು ದುಪ್ಪಟ್ಟಾಗಲಿದೆ.
ಹೀಗಾಗಿ, ಕೋವಿಡ್ ನಿಯಮ ಪಾಲನೆಗೆ ಎರಡು ಸೆಕ್ಷನ್‌ ಮಾಡಲಾಗುತ್ತದೆ. ಬೋಧಕರ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ. ಜತೆಗೆ ಕೊಠಡಿಯ ಕೊರತೆಯು ಕಾಡುತ್ತಿದೆ. ಎರವಲು ಬೋಧಕರ ಸೇವೆಯೂ ನಮಗೆ ತಡವಾಗಿ ಲಭ್ಯವಾಗಿದೆ. ಜತೆಗೆ ಅತಿಥಿ ಉಪನ್ಯಾಸಕರ ನೇಮಕ ವಿಳಂಬವಾಗುತ್ತಿದೆ. ಇದರಿಂದಲೂ ಕೆಲವು ವಿಷಯಗಳ ಪಾಠಗಳು ಪೂರ್ಣಗೊಳ್ಳುತ್ತಿಲ್ಲ ಎಂದರು.

ಕಾಲೇಜು ಮೇಲೆ ಪುಂಡರ ಕಲ್ಲು ತೂರಾಟ

ಮದೀನಾ ಕಾಲೊನಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಾತಿ ಪಡೆಯುತ್ತಿದ್ದಾರೆ. ಆದರೆ, ಸೌಕರ್ಯಗಳ ಕೊರತೆ ಹಾಗೂ ಪುಂಡರ ಹಾವಳಿ ಸಿಬ್ಬಂದಿಯನ್ನು ಕಾಡುತ್ತಿದೆ.

ಈ ವರ್ಷ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ 67, 16 ಹಾಗೂ 58 ವಿದ್ಯಾರ್ಥಿನಿಯರು ಸೇರ್ಪಡೆ ಆಗಿದ್ದಾರೆ. ದ್ವಿತೀಯ ವರ್ಷದಲ್ಲಿ ಅನುಕ್ರಮವಾಗಿ 66, 12 ಮತ್ತು 26 ವಿದ್ಯಾರ್ಥಿಗಳಿದ್ದಾರೆ.

3 ಕೊಠಡಿಗಳ ಪ್ರಯೋಗಾಲಯವಿದೆ. ಆದರೆ, ಅದರಲ್ಲಿದ್ದ ಕೆಲವು ಪರಿಕರಗಳು ಪುಂಡರ ದಾಳಿಗೆ ತುತ್ತಾಗಿವೆ ಎನ್ನುತ್ತಾರೆ ಕಾಲೇಜು ಉಪನ್ಯಾಸಕ ಮಹೇಶ ದೇಶಪಾಂಡೆ.

ಹಿಂಭಾಗದಲ್ಲಿ ಕಾಂಪೌಂಡ್‌ ಇಲ್ಲದೆ, ತರಗತಿ ನಡೆಯುವ ವೇಳೆ ಕಲ್ಲು ತೂರಾಟ ನಡೆದಿದೆ. ಇದರಿಂದ ತಪ್ಪಿಸಿಕೊಳ್ಳಲು ಕಿಟಕಿಗಳಿಗೆ ತಂತಿಯ ಪರದೆ ಹಾಕಲಾಗಿದೆ. ಪ್ರಯೋಗಾಲಯ ಹಾಗೂ ತರಗತಿ ಕೊಠಡಿ ಬಾಗಿಲು ಬೀಗ ಮುರಿದು, ಒಳಗಿದ್ದ ಅಲಮಾರಿ ಮುರಿದು ಅದರಲ್ಲಿನ ಸಲಕರಣೆಗಳನ್ನು ಧ್ವಂಸಗೊಳಿಸಲಾಗಿದೆ. ತರಗತಿಯಲ್ಲಿನ ವಿದ್ಯುತ್ ಸ್ವಿಚ್‌ ಬೋರ್ಡ್‌ಗಳನ್ನು ಕಿತ್ತು ಹಾಕಲಾಗಿದೆ. ಈ ಬಗ್ಗೆ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಆದರೂ ಆಗಾಗ ನಡೆಯುತ್ತಲೇ ಇರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲೇಜಿನಲ್ಲಿ ಸುಮಾರು 300 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಕಾಲೇಜಿಗೆ ಶೌಚಾಲಯ, ಕಾಂಪೌಂಡ್ ಹಾಗೂ ಶೈಕ್ಷಣಿಕ ಅನುಕೂಲಕ್ಕೆ ಪೀಠೋಪಕರಣ, ಪುಸ್ತಕ ಮತ್ತು ಪ್ರಯೋಗಾಲಯದ ಸಲಕರಣೆಗಳ ಅವಶ್ಯವಿದೆ ಎಂದು ಪ್ರಾಂಶುಪಾಲ ಗೌಸುದ್ದೀನ್ ತುಮಕೂರಕರ್ ಹೇಳಿದರು.

*ವಿದ್ಯಾರ್ಥಿಗಳು ಪ್ರತಿ ಕಿರು ಪರೀಕ್ಷೆ ಮತ್ತು ನಿಯೋಜಿತ ಕಾರ್ಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲಿ ಪಡೆದ ಅಂಕಗಳು ವಾರ್ಷಿಕ ಪರೀಕ್ಷೆಯಲ್ಲಿ ಎಣಿಕೆಯಾಗಬಹುದು

ಸುಜಾತಾ ಬಿರದಾರ, ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು

*ಕಿರು ಪರೀಕ್ಷೆಗೆ ನಿಗದಿಯಾದ ಕನ್ನಡ ಪಠ್ಯಕ್ರಮ ಮುಗಿದಿದೆ. ಕೆಲವು ಉಪನ್ಯಾಸಕರು ವಾರದಲ್ಲಿ ಮೂರು ದಿನ ಬಂದು ಪಾಠ ಮಾಡುವುದರಿಂದ ಆ ವಿಷಯಗಳ ಪಠ್ಯಕ್ರಮ ಪೂರ್ಣವಾಗಬೇಕಿದೆ

ಶ್ರೀನಿವಾಸ, ವಾಣಿಜ್ಯ ವಿಭಾಗದ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.