ADVERTISEMENT

ಸಂಘಟನೆಗಳಿಂದ ಸಾಮಾಜಿಕ ಕಾರ್ಯ: ಖಾದರ್

25 ಮನೆಗಳ ಕೀಲಿಕೈ ಸಂತ್ರಸ್ತರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 4:22 IST
Last Updated 14 ಮಾರ್ಚ್ 2023, 4:22 IST
ಸಂತ್ರಸ್ತರಿಗೆ ನಿರ್ಮಿಸಲಾದ ಮನೆಗಳ ಕೀಲಿಕೈ ಅನ್ನು ಶಾಸಕ ಯು.ಟಿ ಖಾದರ್, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕ್ಕೀಂ ಅವರಿಗೆ ಸೋಮವಾರ ಹಸ್ತಾಂತರಿಸಿದರು.
ಸಂತ್ರಸ್ತರಿಗೆ ನಿರ್ಮಿಸಲಾದ ಮನೆಗಳ ಕೀಲಿಕೈ ಅನ್ನು ಶಾಸಕ ಯು.ಟಿ ಖಾದರ್, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕ್ಕೀಂ ಅವರಿಗೆ ಸೋಮವಾರ ಹಸ್ತಾಂತರಿಸಿದರು.   

ಸಿದ್ದಾಪುರ: ‘ಸರ್ಕಾರ ಮಾಡಬೇಕಾದ ಕೆಲಸವನ್ನು ಸಂಘಟನೆಗಳು ಮಾಡಿವೆ’ ಎಂದು ಶಾಸಕ ಯು.ಟಿ.ಖಾದರ್ ಶ್ಲಾಘಿಸಿದರು.

ಪ್ರವಾಹ ಸಂತ್ರಸ್ತರಿಗೆ ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕ್ರೆ ಭಾಗದಲ್ಲಿ ಪೀಪಲ್ಸ್ ಫೌಂಡೇಷನ್, ಜಮಾಅತೆ ಇಸ್ಲಾಮೀ ಹಿಂದ್, ಎಚ್.ಆರ್.ಎಸ್ ಸಂಘಟನೆಗಳ ಸಹಯೋಗದಲ್ಲಿ ನಿರ್ಮಿಸಲಾದ 25 ಮನೆಗಳ ಕೀಲಿಕೈ ಅನ್ನು ಸೋಮವಾರ ಸಂತ್ರಸ್ತರಿಗೆ ಹಸ್ತಾಂತರಿಸಿ, ಬಳಿಕ ಮಾತನಾಡಿದರು.

2018ರಲ್ಲಿ ಭೂಕುಸಿತದ ಸಂದರ್ಭದಲ್ಲಿ ನಾನು ವಸತಿ ಸಚಿವನಾಗಿದ್ದಾಗ ಮಡಿಕೇರಿಯ ಸಂತ್ರಸ್ತರಿಗೆ ನಿರ್ಮಿಸಿ ಕೊಟ್ಟೆವೆ. 2019ರ ಪ್ರವಾಹ ಸಂತ್ರಸ್ತರಿಗೆ ಮ, ನಿವೇಶನವನ್ನು ಸರ್ಕಾರ ನೀಡಿಲ್ಲ. ಈ ನಿಟ್ಟಿನಲ್ಲಿ ಸಂಘಟನೆಗಳು ಸಂತ್ರಸ್ತರಿಗೆ 25 ಮನೆಗಳನ್ನು ನೀಡುತ್ತಿವೆ. ಜಾತಿ, ಧರ್ಮವನ್ನು ನೋಡದೇ ಸಂತ್ರಸ್ತರಿಗೆ ಮನೆ ನೀಡಿರುವುದು ಸಮುದಾಯದ ಗೌರವವನ್ನು ಹೆಚ್ಚಿಸಿದೆ’ ಎಂದು ಹೇಳಿದರು.

ADVERTISEMENT

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಸಂತ್ರಸ್ತರಾದವರಿಗೆ ಮನೆ ನೀಡುತ್ತಿರುವುದು ಪುಣ್ಯದ ಕೆಲಸ. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ’ ಎಂದರು.

ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯಾಧ್ಯಕ್ಷ ಎಂ.ಈ ಅಬ್ದುಲ್ ಅಝೀಝ್ ಮಾತನಾಡಿ, ‘ಮನೆ ಇಲ್ಲದೇ ಲಕ್ಷಾಂತರ ಜನ ಸಂಕಷ್ಟದಲ್ಲಿದ್ದು, ಸಂತ್ರಸ್ತರಿಗೆ ಮನೆ ನೀಡುತ್ತಿರುವುದು ಉತ್ತಮ ಕಾರ್ಯ. ಬಡಾವಣೆಯಲ್ಲಿರುವ ಎಲ್ಲಾ ಕುಟುಂಬಗಳು ಸೌಹಾರ್ಧತೆಯಿಂದ ಇರಬೇಕು’ ಎಂದರು.

ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಂ, ‘2019 ರ ಪ್ರವಾಹದ ಸಂತ್ರಸ್ತರಿಗೆ ದಾನಿಗಳ ಸಹಕಾರದೊಂದಿಗೆ 2 ಎಕರೆ ಖರೀದಿಸಿ, 25 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಮತ್ತಷ್ಟು ಮನೆಗಳನ್ನು ನಿರ್ಮಿಸುವ ಗುರಿ ಇದೆ’ ಎಂದು ಹೇಳಿದರು.

ಶಾಂತಿ ಪ್ರಕಾಶನ ವ್ಯವಸ್ಥಾಪಕ ಎಂ.ಎಚ್ ಮಹಮ್ಮದ್ ಕುಂಞಿ, ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಬೆಗ್ಗಾಮಿ ಮಹಮ್ಮದ್ ಸಾಬ್, ಕೇರಳ ರಾಜ್ಯದ ಉಪಾಧ್ಯಕ್ಷ ಪಿ.ಮುಜೀಬ್‌ ರೆಹಮಾನ್, ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಆಲಿ ಉಡುಪಿ, ಕೇರಳದ ಪೀಪಲ್ಸ್ ಫೌಡೇಷನ್ ಅಧ್ಯಕ್ಷ ಎಂ.ಕೆ.ಮಹಮ್ಮದ್ ಆಲಿ, ಕಾಂಗ್ರೆಸ್ ಮುಖಂಡ ಡಾ.ಮಂಥರ್ ಗೌಡ, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಕೆ ಹಕ್ಕೀಂ, ಪಿಡಿಒ ಅನಿಲ್ ಕುಮಾರ್, ಮುಖಂಡರಾದ ಬಾಳೆಯಡ ದಿವ್ಯಾ ಮಂದಪ್ಪ, ವಿ.ಪಿ.ಶಶಿಧರ್, ಪವನ್ ಪೆಮ್ಮಯ್ಯ, ಕೆ.ಯು.ಮಜೀದ್, ಅಬ್ದುಲ್ ರಹಮಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.