ADVERTISEMENT

ಸೋಮವಾರಪೇಟೆ: ಕ್ವಾರ್ಟರ್ ಫೈನಲ್‌ಗೆ 8 ತಂಡ

ಸೋಮವಾರಪೇಟೆಯಲ್ಲಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 4:23 IST
Last Updated 6 ಮಾರ್ಚ್ 2023, 4:23 IST
ಸೋಮವಾರಪೇಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮುಂಬೈನ್ ಏರ್‌ಲೈನ್ಸ್ ಮತ್ತು ಕರ್ನಾಟಕ ತಂಡದ ನಡುವಿನ ಪಂದ್ಯಾಟದ ರೋಚಕ ಕ್ಷಣ
ಸೋಮವಾರಪೇಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮುಂಬೈನ್ ಏರ್‌ಲೈನ್ಸ್ ಮತ್ತು ಕರ್ನಾಟಕ ತಂಡದ ನಡುವಿನ ಪಂದ್ಯಾಟದ ರೋಚಕ ಕ್ಷಣ   

ಸೋಮವಾರಪೇಟೆ: ಒಕ್ಕಲಿಗರ ಯುವ ವೇದಿಕೆ, ಅಮೇಚೂರ್ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ, ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಇವರ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ನಡೆಯುತ್ತಿರುವ ಒಕ್ಕಲಿಗರ ಕಪ್- 2023 ರಾಷ್ಟ್ರಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನೋಡುಗರನ್ನು ರಂಜಿಸಲು ಯಶಸ್ವಿಯಾಗಿದೆ.

ಪ್ರೊ.ಕಬಡ್ಡಿಯ 20ಕ್ಕೂ ಹೆಚ್ಚಿನ ಆಟಗಾರರು ಹಲವು ತಂಡಗಳಲ್ಲಿ ಆಡುತ್ತಿದ್ದು, ಅವರ ಆಟವನ್ನು ನೇರವಾಗಿ ನೋಡಲು ಅವಕಾಶವಾಗಿದೆ. ಶನಿವಾರದಿಂದ ನಡೆಯುತ್ತಿರುವ ಲೀಗ್ ಮಾದರಿಯ ಪಂದ್ಯಾಟದಲ್ಲಿ 8 ತಂಡಗಳು ಕ್ವಾಟರ್ ಫೈನಲ್ ಹಂತ ತಲುಪಿವೆ.

ಬ್ಯಾಂಕ್ ಆಫ್ ಬರೋಡಾ ತಂಡ ಮುಂಬೈ ಯುವ ಪಲ್ಟಾನ್ ತಂಡದ ವಿರುದ್ಧ ಸೆಣಸಲಿದೆ. ಕೆ.ಎಸ್.ಪಿ ಮತ್ತು ಕರ್ನಾಟಕ 11, ಸೌತ್ ಸೆಂಟ್ರಲ್ ರೈಲ್ವೆ ಮತ್ತು ಏರ್ ಇಂಡಿಯಾ, ಹರ್ಯಾಣ ಎನ್‌ಯುಎಸ್‌ಪಿ ಮತ್ತು ತಮಿಳುನಾಡಿನ ದೊರೈಸಿಗಂ ತಂಡಗಳು ಕ್ಯಾಟರ್ ಫೈನಲ್‌ನಲ್ಲಿ ಎದುರಾಳಿಗಳಾಗಿವೆ.

ಪ್ರೊ.ಕಬಡ್ಡಿಯ ಪ್ರತಿಭಾನ್ವಿತ ಆಟಗಾರರಾದ ಸಿದ್ಧಾರ್ಥ್ ದೇಸಾಯಿ, ಪ್ರಶಾಂತ್ ರೈ, ಸುಖೇಶ್ ಹೆಗಡೆ, ಸಚಿನ್ ವಿಠಲ್, ರಕ್ಷಿತ್ ಪೂಜಾರಿ, ಸಂತೋಷ್, ರಂಜಿತ್ ನಾಯಕ್, ಮನೋಜ್, ದೀಪಕ್, ಅಭಿಷೇಕ್ ನಟರಾಜನ್, ಹರೀಶ್ ನಾಯಕ್, ಪಲ್ಲೆ ಮಲ್ಲಿಕಾರ್ಜುನ್, ನರೇಂದರ್ ಕುಮಾರ್, ಆಶುಸಿಂಗ್, ಮಣಿಕಂಠನ್ ಅವರು ಅದ್ಬುತ ಆಟವಾಡುವ ಮೂಲಕ ಕಬಡ್ಡಿ ಪ್ರೇಮಿಗಳು ಸಂಭ್ರಮಿಸುವಂತೆ ಮಾಡಿದರು.

ADVERTISEMENT

ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹನುಮಂತೇಗೌಡ, ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಉತ್ತಪ್ಪ, ಧ್ಯಾನಚಂದ್ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್, ಅಂತರರಾಷ್ಟ್ರೀಯ ಆಟಗಾರ ಹಾಗೂ ಕೋಚ್ ಜಗದೀಶ್ ಕಾಂಬಳೆ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ರಂಜಿತಾ, ಅಂತರರಾಷ್ಟ್ರೀಯ ಹಾಕಿ ಆಟಗಾರ ವಿಕ್ರಂ ಕಾಂತ್, ಪ್ರೊ.ಕಬಡ್ಡಿ ವೀಕ್ಷಕ ವಿವರಣೆಗಾರ ಶೇಖರ್ ಮೂರ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಬಡ್ಡಿ ಹಬ್ಬಕ್ಕೆ ಮೆರಗು ತಂದರು.

ಕರ್ನಾಟಕ ರಾಜ್ಯ ತೀರ್ಪುಗಾರರ ಮಂಡಳಿ ಅಧ್ಯಕ್ಷ ಷಣ್ಮುಗಂ, ಬೆಂಗಳೂರು ನಗರ ಅಧ್ಯಕ್ಷ ಶಿವಲಿಂಗಪ್ಪ, ಸಂಚಾಲಕ ಶ್ರೀಧರ್ ನಾಯಕ್ ಅವರ ತಂಡ ಮತ್ತು ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರಾಗಿ ಎ.ಎಂ. ಆನಂದ್, ಪ್ರವೀಣ್, ಆದರ್ಶ್, ಅಭಿಷೇಕ್, ಅಮೃತ್, ಮೋಹನ್, ನಿತಿನ್, ಜಿ.ಎಸ್. ಶೈಲಾ, ಬಿ.ಜಿ. ರಾಗಿಣಿ ಕಾರ್ಯನಿರ್ವಹಿಸಿದರು.

ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ. ಸುರೇಶ್, ಮಾಜಿ ಅಧ್ಯಕ್ಷ ದೀಪಕ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ದಾನಿಗಳಾದ ಕಾಮನಳ್ಳಿ ಬೆಳ್ಳಿಗೌಡ ಮತ್ತಿತರರು ಭಾಗವಹಿಸಿದ್ದರು.ಇದೇ ಸಂದರ್ಭ ರಾಜ್ಯ ಅಮೇಚೂರ್ ಅಸೋಸಿಯೇಷನ್ ಅಧ್ಯಕ್ಷ ಹನುಮಂತೇಗೌಡ ಮತ್ತು ದಾನಿಗಳಾದ ಬೆಳ್ಳಿ ಗೌಡ ಸೇರಿದಂತೆ ಹಲವು ಸಾಧಕರನ್ನು ಸನ್ಮಾನಿಸಲಾಯಿತು.

10 ಸಾವಿರ ಮಂದಿ ಕುಳಿತು ಪಂದ್ಯಾಟ ವೀಕ್ಷಿಸಲು ಗ್ಯಾಲರಿ ಆಳವಡಿಸಲಾಗಿದೆ. ಬೆಳಕಿನ ವ್ಯವಸ್ಥೆಯಿರುವ ಎರಡು ಕೋರ್ಟ್‌ಗಳಲ್ಲಿ ಪಂದ್ಯಾಟಗಳು ನಡೆಯುತ್ತಿವೆ. 16 ತಂಡಗಳು ಲೀಗ್ ಮಾದರಿಯಲ್ಲಿ ಆಟವಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.