ADVERTISEMENT

ಮಡಿಕೇರಿ: 6ರಂದು ಗ್ರಾ.ಪಂ ನೌಕರರ ‘ಬೆಂಗಳೂರು ಚಲೋ’

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 12:13 IST
Last Updated 1 ಸೆಪ್ಟೆಂಬರ್ 2021, 12:13 IST

ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ಸೆ.6ರಂದು ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಭರತ್‌ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಂದು ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಮುಖ್ಯರೈಲ್ವೆ ನಿಲ್ದಾಣದಿಂದ ವಿಧಾನಸೌಧದ ತನಕ ಮೆರವಣಿಗೆ ನಡೆಯಲಿದೆ. ಜಿಲ್ಲೆಯಿಂದಲೂ ನೂರಾರು ಸಂಖ್ಯೆಯಲ್ಲಿ ನೌಕರರು ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ನೌಕರರು ಸಂಕಷ್ಟದಲ್ಲಿದ್ದಾರೆ. ಅವರ ಹೋರಾಟದ ಹಕ್ಕನ್ನೂ ಸರ್ಕಾರ ಕಸಿದುಕೊಂಡಿದೆ. ಚಳವಳಿ ನಡೆಸುವಂತೆಯೂ ಇಲ್ಲ. ಹಿರಿತನ ಆಧಾರದ ಮೇಲೂ ಬಡ್ತಿಯನ್ನೂ ಕೊಡುತ್ತಿಲ್ಲ ಎಂದು ಆಪಾದಿಸಿದರು.

ADVERTISEMENT

15ನೇ ಹಣಕಾಸಿನಲ್ಲಿ ಸಂಬಳಕ್ಕಾಗಿ ಮೀಸಲಿಟ್ಟ ಮೊತ್ತವನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಲ್ಲ. ಶಾಸನಬದ್ಧ ಅನುದಾನವನ್ನು ಸಂಬಳಕ್ಕಾಗಿ ಪ್ರತ್ಯೇಕಿಸಿ, ಇಲಾಖೆಯಿಂದ ಕಡಿತಗೊಳಿಸಿ ಸಿಬ್ಬಂದಿಯ ಖಾತೆಗೆ ಜಮೆ ಮಾಡಬೇಕು. ಕಂಪ್ಯೂಟರ್‌ ಆಪರೇಟರ್‌ಗಳಿಗೆ ಸೇವಾ ಅವಧಿ ಪರಿಗಣಿಸಿ, ವೃಂದ ಮತ್ತು ನೇಮಕಾತಿ ತಿದ್ದುಪಡಿ ತಂದು ನೇರ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು. ಅನುಮೋದನೆ ಆಗದವರಿಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ನೌಕರರ ಕನಿಷ್ಠ ಕೂಲಿ ಪರಿಷ್ಕರಣೆ ಮಾಡಿ ಐದು ವರ್ಷಗಳೇ ಕಳೆದಿವೆ. ಬೆಲೆ ಏರಿಕೆ ಆಧರಿಸಿ, ಕನಿಷ್ಠ ಕೂಲಿಯನ್ನು ಪರಿಷ್ಕರಿಸಿ ಹೊಸದಾಗಿ ಆದೇಶಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬಾಕಿಯಿರುವ ಎಲ್ಲ ನೌಕರರ ಇಎಫ್‌ಎಂಎಸ್‌ಗೆ ಸೇರ್ಪಡೆ ಮಾಡಲು ನಿರ್ದೇಶನವು ಎಲ್ಲ ಜಿಲ್ಲಾ ಪಂಚಾಯಿತಿ ಹೋಗಿದ್ದರೂ, ಅದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ತಕ್ಷಣವೇ ಎಲ್ಲ ನೌಕರರನ್ನು ಎಎಫ್‌ಎಂಎಸ್‌ಗೆ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಭರತ್‌ ಒತ್ತಾಯಿಸಿದರು.

ನಿವೃತ್ತರಾಗುವ ನೌಕರರಿಗೆ ಗ್ರಾಚ್ಯುಟಿ ದೊರೆಯುವಂತೆ ಮಾಡಬೇಕು. ಆದರೆ, ಪಂಚಾಯಿತಿಯಲ್ಲಿ ಹಣಕಾಸಿನ ತೊಂದರೆಯಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಪಿ.ಹರೀಶ್‌ ಹಾಗೂ ಎಚ್‌.ಜಿ.ನವೀನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.