ADVERTISEMENT

ಬಿಜೆಪಿ ಕೋಮುವಾದಿ ಅಲ್ಲ, ರಾಷ್ಟ್ರವಾದಿ: ಕೆ.ಎಸ್.ಈಶ್ವರಪ‍್ಪ‍,

ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ಆರಂಭ; ಗೋಣಿಕೊಪ್ಪಲಿನಲ್ಲಿ ಕೆ.ಎಸ್.ಈಶ್ವರಪ‍್ಪ‍, ಸದಾನಂದಗೌಡ ಭಾಗಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 4:45 IST
Last Updated 11 ಮಾರ್ಚ್ 2023, 4:45 IST
ಗೋಣಿಕೊಪ್ಪಲಿನಲ್ಲಿ ಶುಕ್ರವಾರ ನಡೆದ ಬಿಜೆಪಿಯ ವಿಜಯಸಂಕಲ್ಪ ರಥಯಾತ್ರೆಯಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಸದಾನಂದಗೌಡ ಭಾಗಿಯಾಗಿದ್ದರು
ಗೋಣಿಕೊಪ್ಪಲಿನಲ್ಲಿ ಶುಕ್ರವಾರ ನಡೆದ ಬಿಜೆಪಿಯ ವಿಜಯಸಂಕಲ್ಪ ರಥಯಾತ್ರೆಯಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಸದಾನಂದಗೌಡ ಭಾಗಿಯಾಗಿದ್ದರು   

ಗೋಣಿಕೊಪ್ಪ‍ಲು: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಗೂ ಮುನ್ನ ಇದೇ ಮೊದಲ ಬಾರಿಗೆ ಬಿಜೆಪಿ ಪ್ರಚಾರದ ಕಹಳೆಯನ್ನು ವಿರಾಜಪೇಟೆ ಕ್ಷೇತ್ರದ ಗೋಣಿಕೊಪ್ಪಲಿನಲ್ಲಿ ಶುಕ್ರವಾರ ಮೊಳಗಿಸಿತು. ಸಾವಿರಾರು ಮಂದಿ ಸೇರಿದ್ದ ಸಮಾವೇಶದಲ್ಲಿ ಪಕ್ಷದ ಮುಖಂಡರಾದ ಕೆ.ಎಸ್.ಈಶ್ವರಪ್ಪ ಹಾಗೂ ಡಿ.ವಿ.ಸದಾನಂದಗೌಡ ಅವರು ಕಾಂಗ್ರೆಸ್‌ ವಿರುದ್ಧ ಟೀಕೆಗಳ ಸುರಿಮಳೆಗರೆದರು.

ಆರ್‌ಎಂಸಿ ಆವರಣದಿಂದ ಬಸ್‌ನಿಲ್ದಾಣದವರೆಗೆ ಬಂದ ವಿಜಯ ಸಂಕಲ್ಪ ಯಾತ್ರೆಯಲ್ಲೂ ಸಾವಿರಾರು ಮಂದಿ ಬೈಕ್‌ ರ‍್ಯಾಲಿ ನಡೆಸುವ ಮೂಲಕ ಸ್ವಾಗತ ಕೋರಿದರು. ವಾಣಿಜ್ಯ ನಗರಿ ಗೋಣಿಕೊಪ್ಪಲು ಪಟ್ಟಣ ಬಿಜೆಪಿ ಕಾರ್ಯಕರ್ತರಿಂದ ತುಂಬಿ ಹೋಗಿತ್ತು.

‘ಬಿಜೆಪಿ ಕೋಮುವಾದಿ ಅಲ್ಲ, ಜಾತಿವಾದಿ ಅಲ್ಲ. ಅದು ರಾಷ್ಟ್ರವಾದಿ’ ಎಂದು ಪ್ರತಿಪಾದಿಸಿದ ಕೆ.ಎಸ್.ಈಶ್ವರಪ್ಪ, ‘ರಾಷ್ಟ್ರಭಕ್ತಿಯ ಸ್ಪೂರ್ತಿ ಕೊಡುವ ಜಿಲ್ಲೆ ಕೊಡಗು ಜಿಲ್ಲೆ’ ಎಂದು ಶ್ಲಾಘಿಸಿದರು.

ADVERTISEMENT

‘ಇಲ್ಲಿ ಕುಟ್ಟಪ್ಪ ಅವರ ಕೊಲೆಯಾದಾಗ ಸಿದ್ದರಾಮಯ್ಯ ಅವರ ಕಣ್ಣಲ್ಲಿ ನೀರು ಬರಲಿಲ್ಲ. ಆದರೆ, ಮುಸ್ಲಿಮರು ಕೊಲೆಯಾದಾಗ ಮಾತ್ರ ಬರುತ್ತೆ. ಹಿಂದೂಗಳ ಕೊಲೆಯಾದಾಗ ನಿಮ್ಮ ಕಣ್ಣು ಕುರುಡಾಗಿರುತ್ತದೆಯೇ’ ಎಂದೂ ಕಿಡಿಕಾರಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಜಮ್ಮಾ ಬಾಣೆ ಸಮಸ್ಯೆ ಪರಿಹಾರ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಆಯಿತು.
ಇದೀಗ ಬಸವರಾಜ ಬೊಮ್ಮಾಯಿ ಅವರು ₹ 4 ಸಾವಿರ ಕೋಟಿ ಅನುದಾನ ನೀಡಿ ಜಿಲ್ಲೆಯ ಅಭಿವೃದ್ಧಿಗೆ ನೆರವಾಗಿದ್ದಾರೆ. ಈ ಎಲ್ಲ ಸಾಧನೆಗಳು ಜನರಿಗೆ ತಿಳಿಸುವ ಕೆಲಸ ಮಾಡಿ ಮತ್ತೆ ಕೊಡಗಿನಲ್ಲಿ ಕಮಲ ಅರಳಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ನರೇಂದ್ರ ಮೋದಿ ಅವರಿಗೆ ವೀಸಾ ಕೊಡಲು ನಿರಾಕರಿಸಿದ್ದ ಅಮೆರಿಕ ಈಗ ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದೆ. ಮೋದಿ ನಾಯಕತ್ವದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತ ಇಂದು ವಿಶ್ವ ಗುರುವಾಗಿದೆ. ಜಮ್ಮು ಕಾಶ್ಮೀರದ 370 ನೆ ವಿಧಿಯನ್ನು ರದ್ದು ಪಡಿಸಿದ್ದು ಮೋದಿ ಅವರ ನಾಯಕತ್ವಕ್ಕೆ ಸಂದ ದೊಡ್ಡ ಜಯವಾಗಿದೆ. ಹಾಗೆಯೇ, ರಾಮಮಂದಿರ ನಿರ್ಮಾಣದ ಹೆಜ್ಜೆಯೂ ಕೂಡ ಮಹತ್ವದ್ದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಬಿನ್ ದೇವಯ್ಯ, ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮುಖಂಡರಾದ ರೀನಾ ಪ್ರಕಾಶ್, ನೆಲ್ಲೀರ ಚಲನ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.