ADVERTISEMENT

ಮಡಿಕೇರಿ| ಪ್ರಚಾರ ಅಖಾಡಕ್ಕೆ ಬಿಜೆಪಿ ಮುಖಂಡರು

ಗೋಣಿಕೊಪ್ಪಲಿನಿಂದ ಆರಂಭ, ವಾರವಿಡೀ ಪ್ರಮುಖ ನಾಯಕರ ಪ್ರವಾಸ

ಕೆ.ಎಸ್.ಗಿರೀಶ್
Published 10 ಮಾರ್ಚ್ 2023, 6:09 IST
Last Updated 10 ಮಾರ್ಚ್ 2023, 6:09 IST

ಮಡಿಕೇರಿ: ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಶುಕ್ರವಾರದಿಂದ ಧುಮುಕಲಿದ್ದು, ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ ಕಾಂಗ್ರೆಸ್ ವಿರಾಜಪೇಟೆಯಲ್ಲಿ ಸಮಾವೇಶವೊಂದನ್ನು ಏರ್ಪಡಿಸಿ ಕ್ಷೇತ್ರದಲ್ಲಿ ಮುಂದಡಿ ಇಟ್ಟಿತ್ತು. ಅದೇ ರೀತಿ ಬಿಜೆಪಿಯು ವಿರಾಜಪೇಟೆ ಕ್ಷೇತ್ರದಿಂದಲೇ ತನ್ನ ಮೊದಲ ಬೃಹತ್ ಸಮಾವೇಶವನ್ನು ಆರಂಭಿಸಲಿದೆ.

ಪಕ್ಷದ ಉನ್ನತ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಬರುತ್ತಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರಾಬಿನ್ ದೇವಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರೂ, ಗುರುವಾರ ರಾತ್ರಿಯವರೆಗೂ ಅವರ ಬರುವಿಕೆ ಖಚಿತಪಟ್ಟಿರಲಿಲ್ಲ. ಆದರೆ, ಕೆ.ಎಸ್.ಈಶ್ವರಪ್ಪ ಹಾಗೂ ಸದಾನಂದಗೌಡ ಅವರು ಬರುವುದು ಖಚಿತವಾಗಿದ್ದು, ಗೋಣಿಕೊಪ್ಪಲಿನಿಂದ ಶುಕ್ರವಾರ ‘ವಿಜಯಸಂಕಲ್ಪ’ ಅಭಿಯಾನ ಆರಂಭವಾಗಲಿದೆ.

ಗೋಣಿಕೊಪ್ಪಲಿನ ಬಸ್‌ ನಿಲ್ದಾಣ ದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ನೂರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಉಭಯ ನಾಯಕರು ಇಲ್ಲಿ ಮಾತನಾಡಿ, ನಂತರ ಮಡಿಕೇರಿಗೆ ಮರುದಿನ ಮಾರ್ಚ್ 11ರಂದು ಬರಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಮಹದೇವಪೇಟೆಯ ಚೌಡೇಶ್ವರಿ ದೇಗುಲದಿಂದ ಬೃಹತ್ ರೋಡ್‌ ಶೋ ನಡೆಯಲಿದ್ದು, ಇದರಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಸಹ ಭಾಗಿಯಾಗುವುದು ವಿಶೇಷ.

ADVERTISEMENT

ಈ ಮೂಲಕ ಎರಡೂ ಕ್ಷೇತ್ರಗಳಲ್ಲಿಯೂ ಬೃಹತ್ ಸಮಾವೇಶಗಳ ಮೂಲಕ ಜಿಲ್ಲೆಯಲ್ಲಿ ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ದೊಡ್ಡ ಅಲೆಯನ್ನು ಪಕ್ಷದ ಪರವಾಗಿ ಸೃಷ್ಟಿಸಲು ಬಿಜೆಪಿ ಮುಂದಡಿ ಇಟ್ಟಿದೆ. ಇದರ ಬೆನ್ನಲ್ಲೇ ಮಾರ್ಚ್ 13ರಂದು ಸೋಮವಾರಪೇಟೆಯ ಒಕ್ಕಲಿಗರ ಸಮುದಾಯದ ಭವನದಲ್ಲಿ ಇಂಧನ ಸಚಿವ ವಿ.ಸುನಿಲ್‌ಕುಮಾರ್, 14ರಂದು ಮೂರ್ನಾಡುವಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, 15ರಂದು ವಿರಾಜಪೇಟೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, 16ರಂದು ಕುಶಾಲನಗರದಲ್ಲಿ ಗೋವಿಂದ ಕಾರಜೋಳ, 18ರಂದು ಮಡಿಕೇರಿ ಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಸತತ ಒಂದು ವಾರದ ಕಾಲ ನಿರಂತರವಾಗಿ ಬಿಜೆಪಿ ಜಿಲ್ಲೆಯ ಎಲ್ಲ ಪ್ರಮುಖ ಭಾಗಗಳಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಪರವಾದ ಅಲೆಯನ್ನು ಸೃಷ್ಟಿಸುವ ಕಾರ್ಯತಂತ್ರ ಹೆಣೆದಿದೆ.

ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆ ಜಿಲ್ಲೆಗೆ 13ಕ್ಕೆ

ಈಗಾಗಲೇ ಕಾಂಗ್ರೆಸ್ ಮಾರ್ಚ್ 12 ಮತ್ತು 13ರಂದು ‘ಪ್ರಜಾಧ್ವನಿ’ ಯಾತ್ರೆಯನ್ನು ಕೊಡಗು ಜಿಲ್ಲೆಯಲ್ಲಿ ನಡೆಸುವುದಾಗಿ ಪ್ರಕಟಿಸಿತ್ತು. ಆದರೆ, ಈಗ 12ರ ಕಾರ್ಯಕ್ರಮ ರದ್ದಾಗಿದೆ. 13ರಂದು ಮಧ್ಯಾಹ್ನ 12ಕ್ಕೆ ‘ಪ್ರಜಾಧ್ವನಿ’ ಯಾತ್ರೆಯು ಸೋಮವಾರಪೇಟೆ ನಂತರ ಕುಶಾಲನಗರಕ್ಕೆ ಬರಲಿದೆ.

ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಮುಖಂಡರಾದ ಆರ್.ವಿ.ದೇಶಪಾಂಡೆ, ಮಂಜುನಾಥ ಭಂಡಾರಿ ಇವುಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.