ADVERTISEMENT

ಬಿಜೆಪಿಯಿಂದ ತಿಂಗಳಿನಾದ್ಯಂತ ಬಿಡುವಿರದ ಕಾರ್ಯಕ್ರಮ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 16:21 IST
Last Updated 8 ಮಾರ್ಚ್ 2023, 16:21 IST
ರಾಬಿನ್‌ ದೇವಯ್ಯ
ರಾಬಿನ್‌ ದೇವಯ್ಯ   

ಮಡಿಕೇರಿ: ಕೊಡಗು ಜಿಲ್ಲಾ ಬಿಜೆಪಿ ಘಟಕವು ಮಾರ್ಚ್ ತಿಂಗಳಿನಾದ್ಯಂತ ಕೊಡಗು ಜಿಲ್ಲೆಯಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಸೇರಿದಂತೆ ರಾಜ್ಯಮಟ್ಟದ ನಾಯಕರು ವಿವಿಧ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿನ ಗಾಂಧಿ ಮೈದಾನದಲ್ಲಿ ಮಾರ್ಚ್ 18ರಂದು ಬೆಳಿಗ್ಗೆ 10.30ಕ್ಕೆ ಸರ್ಕಾರದ ವತಿಯಿಂದ ನಡೆಯಲಿರುವ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಸುಮಾರು 10 ಸಾವಿರ ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆ ಇದೆ. ನಂತರ, ಅವರು ನಾಪೋಕ್ಲುವಿನಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಬಿನ್‌ ದೇವಯ್ಯ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದಕ್ಕೂ ಮುನ್ನ ಮಲೆಮಹದೇಶ್ವರ ಬೆಟ್ಟದಿಂದ ಹೊರಟಿರುವ ವಿಜಯಸಂಕಲ್ಪ ಯಾತ್ರೆಯು ಮಾರ್ಚ್ 10ರಂದು ಸಂಜೆ 5 ಗಂಟೆಗೆ ಗೋಣಿಕೊಪ್ಪಲಿಗೆ ಬರಲಿದ್ದು, ಅಲ್ಲಿ ನಡೆಯಲಿರುವ ದೊಡ್ಡ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಭಾಗವಹಿಸಲಿದ್ದಾರೆ. ಮರುದಿನ 11ರಂದು ಬೆಳಿಗ್ಗೆ ಮಡಿಕೇರಿಯ ಚೌಡೇಶ್ವರಿ ದೇಗುಲದಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ನಡೆಯಲಿರುವ ರೋಡ್‌ಶೋನಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದರು.

ADVERTISEMENT

ಮಾರ್ಚ್ 13ರಂದು ಸೋಮವಾರಪೇಟೆಯ ಒಕ್ಕಲಿಗರ ಸಮುದಾಯದ ಭವನದಲ್ಲಿ ನಡೆಯಲಿರುವ ಯುವಮೋರ್ಚಾ ಸಮಾವೇಶದಲ್ಲಿ ಇಂಧನ ಸಚಿವ ಸುನಿಲ್‌ಕುಮಾರ್, 14ರಂದು ಮೂರ್ನಾಡುವಿನಲ್ಲಿ ನಡೆಯಲಿರುವ ರೈತ ಮೋರ್ಚಾ ಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, 15ರಂದು ವಿರಾಜಪೇಟೆಯಲ್ಲಿ ನಡೆಯಲಿರುವ ಮಹಿಳಾ ಮೋರ್ಚಾದ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, 16ರಂದು ಕುಶಾಲನಗರದಲ್ಲಿ ನಡೆಯಲಿರುವ ಎಸ್.ಸಿ. ಮೋರ್ಚಾ ಸಭೆಯಲ್ಲಿ ಗೋವಿಂದ ಕಾರಜೋಳ, 20ರಂದು ಪೊನ್ನಂಪೇಟೆಯಲ್ಲಿ ಎಸ್.ಟಿ.ಮೋರ್ಚಾ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಬಿಜೆಪಿ ವಕ್ತಾರ ಮಹೇಶ್‌ ಜೈನಿ, ಮುಖಂಡರಾದ ರೂಪಾ ಸತೀಶ, ಮನುಮಂಜುನಾಥ, ಮಾದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.