ADVERTISEMENT

ಚೇರಳ ಭಗವತಿ ಉತ್ಸವ: ಜಿಂಕೆ ಕೊಂಬಿನ ಕೊಂಬಾಟ್ ನೃತ್ಯದ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 6:14 IST
Last Updated 7 ಮಾರ್ಚ್ 2023, 6:14 IST
ಸಿದ್ದಾಪುರ ಸಮೀಪದ ಚೆಟ್ಟಳ್ಳಿಯ ಪುರುಷರು ಸಾಂಪ್ರದಾಯಿಕ ವಸ್ತ್ರ ಧರಿಸಿ, ಜಿಂಕೆ ಕೊಂಬು ಹಿಡಿದು ಕೊಂಬಾಟ್ ನೃತ್ಯ ಮಾಡಿದರು
ಸಿದ್ದಾಪುರ ಸಮೀಪದ ಚೆಟ್ಟಳ್ಳಿಯ ಪುರುಷರು ಸಾಂಪ್ರದಾಯಿಕ ವಸ್ತ್ರ ಧರಿಸಿ, ಜಿಂಕೆ ಕೊಂಬು ಹಿಡಿದು ಕೊಂಬಾಟ್ ನೃತ್ಯ ಮಾಡಿದರು   

ಸಿದ್ದಾಪುರ: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕೋತ್ಸವವು ಸಂಪ್ರದಾಯದಂತೆ ಶ್ರದ್ಧಾಭಕ್ತಿಯಿಂದ ನಡೆಯಿತು. ಮಾರ್ಚ್‌ 3ರಿಂದ ಆರಂಭವಾದ ಉತ್ಸವದಲ್ಲಿ ‘ಪಟ್ಟಣಿಹಬ್ಬ’ ದಂದುಕಲ್ಡಚ ಹೋಗುವ ಸಂಪ್ರದಾಯದಂತೆ ಊರಿನ 10 ವರ್ಷದ ಒಳಗಿನ ಹೆಣ್ಣು ಮಕ್ಕಳು ದೇವಾಲಯದಿಂದ ಕಲಶದಲ್ಲಿ ನೀರನ್ನು ತೆಗೆದುಕೊಂಡು ಹೋಗಿ ಚೌಂಡಿ ಬನದಲ್ಲಿ ಪೂಜೆ ಸಲ್ಲಿಸಿ ಪಾಯಿಸ ಮಾಡಿ ನೈವೇದ್ಯ ಅರ್ಪಿಸಿದರು.

ಗ್ರಾಮಸ್ಥರು ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತಂದು ದೇವಾಲಯದಲ್ಲಿ ದೇವರಿಗೆ ಮಹಾಪೂಜೆ, ಕೊಂಬಾಟ್ ಆದನಂತರ ದೇವರ ಭಂಡಾರವನ್ನು ಒಡ್ಡೋಲಗ ದುಡಿಕೊಟ್ಟ್‌ನೊಂದಿಗೆ ದೇವತಕ್ಕರ ಮನೆಯಲ್ಲಿ ಇಡಲಾಯಿತು.

ಮಾರ್ಚ್‌ 4ರಂದು ಅಯ್ಯಪ ದೇವರ ಬನಕ್ಕೆ ತೆರಳಿ ಬಲಿಪೂಜೆ ನೀಡಲಾಯಿತು. ಮಾರ್ಚ್‌ 5ರಂದು ಭಗವತಿ ದೇವಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಗ್ರಾಮಸ್ಥರು ಸಾಂಪ್ರದಾಯಿಕ ವಸ್ತ್ರದಲ್ಲಿ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರ ಮನೆಯಾದ ಚೇರಳ ತಮ್ಮಂಡ ಆನಂದರವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ಊರು ತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣನವರ ಸಮ್ಮುಖದಲ್ಲಿ ದೇವಾಲಯದ ವಾರ್ಷಿಕೋತ್ಸವದ ವಿಧಿವಿಧಾನಗಳನ್ನು ಸಂಪ್ರದಾಯದಂತೆ ಪೂಜೆ ನೆರವೇರಿಸಲಾಯಿತು.

ADVERTISEMENT

ಬಿಳಿಕುಪ್ಪಸದಟ್ಟಿಯನ್ನು ಧರಿಸಿದ ಊರಿನ ಅಮ್ಮಕೊಡವ, ಕೊಡವ ಹಾಗೂ ಗೌಡಜನಾಂಗದ ಪುರುಷರು, ದೇವಾಲಯದಲ್ಲಿ ಇಟ್ಟಂತ ಜಿಂಕೆ ಕೊಂಬನ್ನು ಹಿಡಿದು 18 ತರಹದ ಕೊಂಬಾಟ್ ನೃತ್ಯ ಮಾಡಿದರು. ಚೆಟ್ಟಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.