ADVERTISEMENT

ಹಸಿರಿನ ಉಯ್ಯಾಲೆಯಲ್ಲಿ ತೂಗಾಡುವ ಬಿಸಿಲು

ಕಾಫಿ ನಾಡಿನಲ್ಲೊಂದು ವಿಹಾರಕ್ಕೆ ಕೈ ಬೀಸಿ ಕರೆವ ಚೋಮನ ಕುಂದ್

ಸಿ.ಎಸ್.ಸುರೇಶ್
Published 11 ಮಾರ್ಚ್ 2023, 19:30 IST
Last Updated 11 ಮಾರ್ಚ್ 2023, 19:30 IST
ನಾಪೋಕ್ಲು ಸಮೀಪದ ಚೇಲಾವರ ಗ್ರಾಮದ ಮನಮೋಹಕ ಚೋಮನ ಕುಂದ್
ನಾಪೋಕ್ಲು ಸಮೀಪದ ಚೇಲಾವರ ಗ್ರಾಮದ ಮನಮೋಹಕ ಚೋಮನ ಕುಂದ್   

ನಾಪೋಕ್ಲು: ಹಸಿರಿನ ಉಯ್ಯಾಲೆಯಲ್ಲಿ ತೂಗಾಡುವ ಬಿಸಿಲು, ಹತ್ತಿಯ ಉಂಡೆಗಳಂತೆ ಸಾಲುಗಟ್ಟಿ ಇರುವೆ ಸಾಲಿನಂತೆ ಬರುವ ಮೋಡಗಳು, ಬೀಸುವ ಕುಳಿರ್ಗಾಳಿ... ಹೀಗೆ ಪ್ರಕೃತಿಯ ಅಪರೂಪದ ಕ್ಷಣಗಳನ್ನು ಆಸ್ವಾದಿಸುವ ಅವಕಾಶ ಇಲ್ಲಿಗೆ ಸಮೀಪದ ಚೋಮನ ಕುಂದ್‌ನಲ್ಲಿದೆ.

ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿರುವ ಇಲ್ಲಿಗೆ ಚಾರಣಕ್ಕೆಂದೇ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಇಲ್ಲಿನ ನಿಸರ್ಗದ ಸಿರಿ ಚಾರಣಿಗರನ್ನು ಮೋಡಿ ಮಾಡುತ್ತದೆ.

ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಹೋಬಳಿಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಮನ ಕುಂದ್ ನಾಪೋಕ್ಲುವಿನಿಂದ 17 ಕಿ,ಮೀ.ದೂರದಲ್ಲಿದೆ. ಚೆಯ್ಯಂಡಾಣೆಯಿಂದ 6 ಕಿ.ಮೀ ಸಾಗಿದರೆ ಚೇಲಾವರದ ಕಬ್ಬೆ ಬೆಟ್ಟದ ತಳ ತಲುಪಬಹುದು. ಸ್ವಂತ ವಾಹನದಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಶಿಖರದ ತಳಭಾಗದವರೆಗೆ ಸಾಗಿದರೆ ಮತ್ತೆ ಕಾಲ್ನಡಿಗೆಯ ಚಾರಣದ ಹಾದಿ. ಬೋಳು ಬೆಟ್ಟಗಳ ಏರುಹಾದಿಯಲ್ಲಿ ಹೆಜ್ಜೆ ಹಾಕುವಾಗ ಚಾರಣದ ಜೊತೆ ಜೊತೆಯಲ್ಲಿ ನಿಸರ್ಗ ರಮಣೀಯ ದೃಶ್ಯಗಳನ್ನೂ ಸೆರೆ ಹಿಡಿಯಬಹುದು.

ADVERTISEMENT

ಚೋಮನ ಕುಂದ್ ಯಾರಿಗೂ ನಿರಾಸೆ ತರಿಸುವುದಿಲ್ಲ, ಬೇಸರ ಎನ್ನಿಸುವುದಿಲ್ಲ. ಬೆಟ್ಟವನ್ನೇರುವ ಹಾದಿಯಲ್ಲಿ ನಿಸರ್ಗ ರಮಣೀಯ ದೃಶ್ಯಗಳ ಕಣಜವೇ ಸಿಗುತ್ತದೆ. ಬಿಸಿಲಿನ ದಿನಗಳಲ್ಲೂ ಮೋಡಗಳ ಸರಮಾಲೆ, ಕಣಿವೆಗಳ ನಡುವಿನಿಂದ ಮಂಜು ಮೇಲೆದ್ದು ಬಂದು ಆವರಿಸುವ ದೃಶ್ಯ ಮನಮೋಹಕ. ಸುತ್ತಲೂ ಬೆಟ್ಟದ ಸಾಲುಗಳು, ಒಂದೆಡೆ ಧಾವಿಸಿ ಬರುವ ಮೋಡಗಳ ಸಾಲು, ಬೀಸುವ ತಂಪುಗಾಳಿ, ನಿಂತು ನೋಡಿದಾಗ ಅದ್ಭುತ ಪ್ರಕೃತಿ ಸೌಂದರ್ಯ ಚಾರಣಿಗರ ಆಯಾಸವನ್ನು ಮರೆಸುತ್ತದೆ.

ಸುತ್ತಲಿನ ಮನಮೋಹಕ ನಿಸರ್ಗ ಸೌಂದರ್ಯ, ದೃಷ್ಟಿಗೆ ನಿಲುಕದಷ್ಟು ಆಳ, ಅಗಲವಾದ ಹಸಿರು ಪರ್ವತ ಶ್ರೇಣಿಗಳು, ಎತ್ತರ ತಗ್ಗಿನ ರುದ್ರರಮಣೀಯ ದೃಶ್ಯಗಳು ಮನಸೆಳೆಯುತ್ತವೆ. ಸಾಮಾನ್ಯವಾಗಿ ಚಳಿಯ ಆರ್ದ್ರತೆಯನ್ನು ಉಳಿಸಿಕೊಂಡ ಈ ಅವಧಿ ಚಾರಣಕ್ಕೆ ಪ್ರಶಸ್ತವಾದುದು.

ಕಾಡು, ಕಣಿವೆ, ಬೆಟ್ಟತಂಪುಗಾಳಿ ಮನಸ್ಸಿಗೆ ಮುದ ನೀಡುತ್ತವೆ. ಬಿಸಿಲು, ಮೋಡ, ಮಂಜು ಕ್ಷಣಕ್ಕೊಮ್ಮೆ ಬದಲಾಗುವ ವಾತಾವರಣದಲ್ಲಿ ರಮ್ಯ, ರೋಚಕ ಹಾದಿಯನ್ನು ಕಾಲ್ನಡಿಗೆಯಲ್ಲಿ ಸವೆಸುವುದು ಒಂದು ಅಪೂರ್ವ ಅನುಭವ. ವರ್ಷದ ಬಹುಕಾಲ ಮಂಜಿನ ಸೆರಗಿನಲ್ಲಿ ತನ್ನಸೌಂದರ್ಯವನ್ನು ಮುಚ್ಚಿಟ್ಟುಕೊಂಡಿರುತ್ತದೆ ಈ ಚೋಮನ ಕುಂದ್. ಹಾಗಾಗಿ, ಬೆಟ್ಟದ ಸುತ್ತಲಿನ ಗುಡ್ಡಗಳನ್ನು ಕೆಳಗಿನ ಕಣಿವೆಗಳನ್ನು ಕಣ್ತುಂಬಿಕೊಳ್ಳಲು ಪ್ರಶಸ್ತವಾಗಿದೆ. ಸಂಜೆಯ ಸೂರ್ಯಾಸ್ತದ ದೃಶ್ಯವೂ ಮನಮೋಹಕ.

ಮಳೆಗಾಲದ ನಂತರದ ದಿನಗಳಲ್ಲಾದರೆ ಚೇಲಾವರ ಗ್ರಾಮದ ಪ್ರಸಿದ್ಧ ಚೇಲಾವರ ಜಲಪಾತವೂ ಖುಷಿ ನೀಡುತ್ತವೆ. ವಾರಾಂತ್ಯದ ದಿನಗಳಲ್ಲಿ 40-50 ಮಂದಿ ಪ್ರವಾಸಿಗರು ಬರುತ್ತಾರೆ. ಉಳಿದ ದಿನಗಳಲ್ಲಿ ಕಡಿಮೆ. ಶಿಖರದ ತಪ್ಪಲಲ್ಲಿ ಎಡಕ್ಕೆ ತಿರುಗಿ ಸಾಗಿದರೆ ಚೋಮಕುಂದು, ಬಲಕ್ಕೆ ಸಾಗಿದರೆ ಕಬ್ಬೆ ಬೆಟ್ಟದ ಸೊಬಗು ಕೈಬೀಸಿ ಕರೆಯುತ್ತದೆ. ಅರ್ಧ ಗಂಟೆಯಲ್ಲಿ ಚೋಮಕುಂದು ಶಿಖರವನ್ನೇರಬಹುದು. ಸ್ಥಳೀಯರು ಕಬ್ಬೆಬೆಟ್ಟವನ್ನು ತೂಕುಪಾರೆ, ದೊಡ್ಡಬೆಟ್ಟ ಎಂದು ಕರೆಯುತ್ತಾರೆ. ಚಾರಣಕ್ಕೆ ಕೈಬೀಸಿ ಕರೆವ ಚೋಮನ ಕುಂದ್ ಚಾರಣಿಗರ, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.