ADVERTISEMENT

ಅಪಘಾತ ಪ್ರಕರಣದಲ್ಲೂ ಬಿಜೆಪಿ ರಾಜಕೀಯ: ಕಾಂಗ್ರೆಸ್‌ ಮುಖಂಡ ಉತ್ತಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 13:04 IST
Last Updated 2 ಆಗಸ್ಟ್ 2021, 13:04 IST
ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿದರು. ಹಂಸ, ಮುನೀರ್‌ ಅಹಮ್ಮದ್‌, ಟಿ.‍ಪಿ.ರಮೇಶ್‌, ವೀಣಾ ಅಚ್ಚಯ್ಯ, ಸೂರಜ್‌ ಹೊಸೂರು ಹಾಜರಿದ್ದರು
ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿದರು. ಹಂಸ, ಮುನೀರ್‌ ಅಹಮ್ಮದ್‌, ಟಿ.‍ಪಿ.ರಮೇಶ್‌, ವೀಣಾ ಅಚ್ಚಯ್ಯ, ಸೂರಜ್‌ ಹೊಸೂರು ಹಾಜರಿದ್ದರು   

ಮಡಿಕೇರಿ: ‘ಕೆಲವೇ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗೆ ಚುನಾವಣೆ ನಡೆಯಲಿದ್ದು, ಬೋಯಿಕೇರಿ ಬಳಿ ಆಕಸ್ಮಿಕವಾಗಿ ನಡೆದ ಅಪಘಾತ ಘಟನೆಯನ್ನೇ ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಇಲ್ಲಿ ಆಪಾದಿಸಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರು ಘಟನೆ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ತಮ್ಮ ಹಿಂಬಾಲಕರನ್ನು ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸದ ಪ್ರತಾಪ ಸಿಂಹ ಅವರು ದಕ್ಷಿಣ ಕೊಡಗಿನಲ್ಲಿ ಹುಲಿ ಹಾಗೂ ಆನೆ ದಾಳಿ ನಡೆದಾಗ ಎಲ್ಲಿಗೆ ಹೋಗಿದ್ದರು? ಈಗ ಅಪಘಾತ ಪ್ರಕರಣವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಯೋಧನ ಮನೆಗೆ ಭೇಟಿ ನೀಡಿದ್ದಾರೆ’ ಎಂದು ದೂರಿದರು.

‘ಕೊಡಗು ಶಾಂತಿ ಪ್ರಿಯ ಜಿಲ್ಲೆ. ಬೋಯಿಕೇರಿ ಬಳಿ ನಡೆದಿದ್ದು, ಆಕಸ್ಮಿಕ ಅಪಘಾತ ಘಟನೆ. ಅದರಲ್ಲಿ ಯಾವುದೇ ಉದ್ದೇಶ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಎರಡು ಕಡೆಯವರೂ ಆಕಸ್ಮಿಕ ಘಟನೆಯೆಂದು ನಾವು ಭೇಟಿ ನೀಡಿದ್ದಾಗ ಸ್ಪಷ್ಟಪಡಿಸಿದ್ದಾರೆ. ಆದರೆ, ವಿಎಚ್‌ಪಿ, ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು ಇದನ್ನೇ ಚುನಾವಣೆಯ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ ಅವರು, ಎರಡು ಕುಟುಂಬಗಳನ್ನು ಒಂದೆಡೆ ಸೇರಿಸಿ, ಪ್ರಕರಣ ಮುಕ್ತಗೊಳಿಸುವುದು ನಮ್ಮ ಉದ್ದೇಶವಾಗಿದೆ. ಈ ಪ್ರಕರಣಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿದೆ’ ಎಂದು ಧರ್ಮಜ ಅವರು ಹೇಳಿದರು.

ADVERTISEMENT

‘ಬಿಜೆಪಿಯ ರಾಜಕೀಯ ತಂತ್ರಗಾರಿಕೆ ನಾಚಿಕೆಗೇಡಿನದ್ದು. ವಿಎಚ್‌ಪಿ ಹಾಗೂ ಸಂಘ ಪರಿವಾರದವರು, ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿದ್ದಾರೆ. ಈ ದೇಶದಲ್ಲಿ ಎಲ್ಲ ಸಮುದಾಯಕ್ಕೂ ಬದುಕುವ ಹಕ್ಕಿದೆ. ಘಟನೆಗೆ ಕೋಮು ಬಣ್ಣ ಕಟ್ಟುತ್ತಿರುವುದು ದುರಂತ’ ಎಂದು ಹೇಳಿದರು.

‘ಅವರೆಲ್ಲರೂ ಸ್ಥಿತಿವಂತರು. ನಾಲ್ಕು ಮಂದಿಗೆ ನೆರವಾಗುವ ಶಕ್ತಿ, ಸಾಮರ್ಥ್ಯವಿದೆ. ಅವರಿಗೆ ದರೋಡೆ ಮಾಡುವ ಅಗತ್ಯವಿಲ್ಲ. ಬಿಜೆಪಿ ಈ ಘಟನೆಯನ್ನು ಇಲ್ಲಿಗೆ ಬಿಡುವುದು ಒಳ್ಳೆಯದ್ದು. ಪ್ರತಿಭಟನೆಯ ಸ್ಥಳದಲ್ಲಿ ಶಾಸಕರು, ಪರಿಷತ್‌ ಸದಸ್ಯರೂ ಇದ್ದರು. ಅಂದರೆ ಏನರ್ಥ’ ಎಂದು ಕಾರ್ಯಾಧ್ಯಕ್ಷರು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ಯುಟ್ಯೂಬ್‌ ಚಾನಲ್‌ವೊಂದು, ನನ್ನ ವಿರುದ್ಧ ತೇಜೋವಧೆ ರೀತಿಯಲ್ಲಿ ವರದಿ ಮಾಡಿದೆ. ಆ ಚಾನಲ್‌ ವಿರುದ್ಧ ಪ್ರಕರಣ ದಾಖಲಿಸುತ್ತೇನೆ. ವಕೀಲರ ಜೊತೆಗೂ ಚರ್ಚಿಸಿದ್ದೇನೆ’ ಎಂದು ಎಚ್ಚರಿಸಿದರು.

ಮುಖಂಡ ಮುನೀರ್ ಅಹಮ್ಮದ್ ಮಾತನಾಡಿ, ‘ಅಪಘಾತ ಘಟನೆಗೆ ಬಿಜೆಪಿ ರೆಕ್ಕೆಪುಕ್ಕ ಕಟ್ಟುತ್ತಿದೆ. ಅಪಘಾತಕ್ಕೆ ಕೋಮುಬಣ್ಣ ಕಟ್ಟುತ್ತಿರುವುದು ಇದೇ ಮೊದಲು ಅನಿಸುತ್ತೆ. ಎಸ್‌ಪಿ ಮೇಲೆ ಒತ್ತಡ ಹೇರಿ ರೌಡಿಪಟ್ಟಿ ತೆರೆಯುವ ಹೇಳಿಕೆ ಕೊಡಿಸಿದ್ದಾರೆ. ಮೂರು ಗಂಟೆಗಳ ಕಾಲ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸಾವಿರಾರರು ಜನರಿಗೆ ತೊಂದರೆ ನೀಡಲಾಗಿದೆ’ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಮುಖಂಡ ಟಿ.ಪಿ.ರಮೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಂಸ, ಸಾಮಾಜಿಕ ಜಾಲತಾಣ ವಿಭಾಗದ ಮುಖಂಡ ಸೂರಜ್‌ ಹೊಸೂರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.