ADVERTISEMENT

ಕೊಡಗು: ಜಿಲ್ಲೆಯಲ್ಲಿ ಶಾಲಾ, ಕಾಲೇಜು ಆರಂಭಿಸಲು ಅಸ್ತು

ಕೋವಿಡ್‌ ಪ್ರಮಾಣ ಇಳಿಕೆ: ಸೆ.17ರಿಂದ ಭೌತಿಕ ತರಗತಿಗಳು ಆರಂಭ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 14:56 IST
Last Updated 14 ಸೆಪ್ಟೆಂಬರ್ 2021, 14:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಸೆ.17ರಿಂದ ಶಾಲಾ, ಕಾಲೇಜು ಆರಂಭಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಅಂದಾಜು ಒಂದೂವರೆ ವರ್ಷದ ಬಳಿಕ ತರಗತಿಗಳು ಆರಂಭವಾಗುತ್ತಿದ್ದು, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಕಲರವ ಕಂಡು ಬರಲಿದೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಶಾಲಾ– ಕಾಲೇಜು ಆರಂಭವಾಗಿದ್ದರೂ, ಕೋವಿಡ್‌ ದೃಢಪ್ರಮಾಣವು ಇಳಿಕೆಯಾಗದ ಕಾರಣಕ್ಕೆ ಜಿಲ್ಲೆಯಲ್ಲಿ ಭೌತಿಕ ತರಗತಿಗಳು ಆರಂಭವಾಗಿರಲಿಲ್ಲ. ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ 2ಕ್ಕಿಂತ ಕಡಿಮೆ ಇದ್ದು, ಭೌತಿಕ ತರಗತಿಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಸಿದ್ಧತೆ ಮಾಡಿಕೊಳ್ಳಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ, ತಾಂತ್ರಿಕ, ಡಿಪ್ಲೊಮಾ ಕಾಲೇಜುಗಳ ಸ್ನಾತಕೋತ್ತರ ತರಗತಿ, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಯ 9 ಮತ್ತು 10ನೇ ತರಗತಿ ಹಾಗೂ ಪದವಿ ಪೂರ್ವ ಕಾಲೇಜುಗಳ ಭೌತಿಕ ತರಗತಿ ಆರಂಭಿಸಲು ಸೂಚಿಸಲಾಗಿದೆ.

ಹಿಂದುಳಿದ, ಅಲ್ಪಸಂಖ್ಯಾತರ, ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ಹಾಸ್ಟೆಲ್‍ಗಳ ಅಧಿಕಾರಿ, ಸಿಬ್ಬಂದಿ ಕನಿಷ್ಠ ಒಂದು ಕೋವಿಡ್-19 ಲಸಿಕೆ ಪಡೆದಿರಬೇಕು. ಶಾಲಾ–ಕಾಲೇಜು, ವಿದ್ಯಾಸಂಸ್ಥೆ ಮತ್ತು ಹಾಸ್ಟೆಲ್‍ಗಳನ್ನು ನಿಯಮಾನುಸಾರ ಸ್ಯಾನಿಟೈಸ್ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಕನಿಷ್ಠ 1 ಕೋವಿಡ್-19 ಲಸಿಕೆ ಪಡೆದಿರಬೇಕು. ಪದವಿ ಮತ್ತು ಅದಕ್ಕೆ ಮೇಲ್ಪಟ್ಟ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನಿಷ್ಠ 1 ಕೋವಿಡ್-19 ಲಸಿಕೆ ಪಡಿದಿರಬೇಕು. ವಿದ್ಯಾರ್ಥಿಗಳ ಪೋಷಕರು ಕೋವಿಡ್-19 ಲಸಿಕೆ ಪಡೆದಿರುವುದನ್ನು ಆಯಾ ಶಿಕ್ಷಕರು ಖಚಿತ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ತಿಳಿಸಿದ್ದಾರೆ.

ಪ್ರತಿ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿನಿಲಯದಲ್ಲಿ ಒಂದು ಕೊಠಡಿಯನ್ನು ಐಸೋಲೋಷನ್ ಕೊಠಡಿ ಆಗಿ ಕಾಯ್ದಿರಿಸಬೇಕು. ಶಾಲಾ, ಕಾಲೇಜುಗಳು ಆರಂಭವಾಗುತ್ತಿರುವ ಕಾರಣ ಗ್ರಾಮೀಣ ಪ್ರದೇಶಕ್ಕೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಸೇವೆ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

‘9 ಹಾಗೂ 10ನೇ ತರಗತಿಯ 15 ಸಾವಿರ ವಿದ್ಯಾರ್ಥಿಗಳಿದ್ದಾರೆ. ಸದ್ಯಕ್ಕೆ ಅರ್ಧ ದಿನ ಮಾತ್ರ ತರಗತಿಗಳು ನಡೆಯಲಿವೆ. ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಕಾರಣಕ್ಕೆ ತಂಡ ಮಾಡುತ್ತಿಲ್ಲ. ಹಾಗೊಮ್ಮೆ ತಂಡಗಳು ಬೇಕಿದ್ದರೆ ಆಯಾ ಶಾಲೆಯ ಮುಖ್ಯ ಶಿಕ್ಷಕರೇ ನಿರ್ಧಾರ ಕೈಗೊಳ್ಳಬಹುದು. ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ’ ಎಂದು ಡಿಡಿಪಿಐ ಶ್ರೀಧರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.