ADVERTISEMENT

ದುಬಾರೆ: ಸಾಕಾನೆಗಳ ಆರೋಗ್ಯ ತಪಾಸಣೆ

13 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 6:23 IST
Last Updated 19 ಜುಲೈ 2021, 6:23 IST
ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಭಾನುವಾರ ಆನೆಗಳಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು
ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಭಾನುವಾರ ಆನೆಗಳಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು   

ಕುಶಾಲನಗರ (ಕೊಡಗು): ದುಬಾರೆ ಸಾಕಾನೆ ಶಿಬಿರದಲ್ಲಿ ಭಾನುವಾರ ಸಾಕಾನೆಗಳ ಆರೋಗ್ಯ ತಪಾಸಣಾ ನಡೆಸಲಾಯಿತು.

ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಹಿರಿಯ ಪಶು ವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ ನೇತೃತ್ವದಲ್ಲಿ ಡೆಹ್ರಾಡೂನ್ ವೈದ್ಯರ ತಂಡದಿಂದ 31 ಆನೆಗಳನ್ನು ತಪಾಸಣೆ ಮಾಡಲಾಯಿತು.

ಎಲ್ಲ ಆನೆಗಳ ರಕ್ತ ಸಂಗ್ರಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಆನೆಗಳಿಗೆ ಟಿ.ಬಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ಪತ್ತೆಗಾಗಿ ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ತಿಳಿಸಿದ್ದಾರೆ.

ADVERTISEMENT

ಡಾ.ಸನತ್ ಮುಳಿಯ, ಜರ್ಮನಿ ಸಂಸ್ಥೆಯ ಡಾ.ನವನೀತ್, ಡಾ.ತಮ್ಮಯ್ಯ ಹಾಗೂ ದುಬಾರೆ ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಹಾಗೂ ಸಿಬ್ಬಂದಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

13 ಆನೆಗಳಿಗೆ ರೇಡಿಯೋ ಕಾಲರ್: ಕೊಡಗು ಜಿಲ್ಲೆಯ ವಿರಾಜಪೇಟೆ ವ್ಯಾಪ್ತಿಯ 3 ಹೆಣ್ಣಾನೆ ಹಾಗೂ ಹಾಸನ ಜಿಲ್ಲಾ ಗಡಿಭಾಗದ 3 ಆನೆಗಳು ಸೇರಿದಂತೆ ಒಟ್ಟು 13 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ.

ಅರಣ್ಯ ಇಲಾಖೆ, ಡೆಹ್ರಾಡೂನ್ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್‌ ಹಾಗೂ ಜರ್ಮನಿಯ ಜಿಐಜೆಡ್ ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಕಾಡಿನಿಂದ‌ ನಾಡಿಗೆ‌ ಲಗ್ಗೆ ಹಾಕುವ ಹಾಗೂ ಪುಂಡಾನೆಗಳ ಚಲನವಲನ ಪ್ರತಿ ಗಂಟೆಗೊಮ್ಮೆ ಸಂಗ್ರಹಿಸಿ ಅವುಗಳ ನಿಯಂತ್ರಣಕ್ಕೆ ಕಾಲರ್ ಸಹಕಾರಿಯಾಗಿದೆ ಎಂದು ಡೆಹ್ರಾಡೂನ್ ಸಂಸ್ಥೆಯ ಡಾ.ಸನತ್ ಮುಳಿಯ ತಿಳಿಸಿದ್ದಾರೆ.

ಕಾಡಾನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಆನೆಗಳ ಮಾಹಿತಿ ಸಂಗ್ರಹಿಸಿ ಅವುಗಳಿಂದ ಅನಾಹುತ ತಪ್ಪಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.