ADVERTISEMENT

ಹಿಂದಿನ ಬಾಕಿ ಪರಿಗಣಿಸದೇ ಉಚಿತ ವಿದ್ಯುತ್ ನೀಡಿ

ಸೆಸ್ಕ್ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 7:31 IST
Last Updated 19 ಮಾರ್ಚ್ 2023, 7:31 IST
ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ‘ಫಲಾನುಭವಿಗಳ ಸಮ್ಮೇಳನ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಪ್‌ಗೆ ಕಾಫಿ ಹಾಕುವ ಮೂಲಕ ಚಾಲನೆ ನೀಡಿದರು. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಸುಜಾಕುಶಾಲಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಶಾಸಕ ಪ್ರತಾಪಸಿಂಹ ನಾಯಕ ಇದ್ದಾರೆ
ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ‘ಫಲಾನುಭವಿಗಳ ಸಮ್ಮೇಳನ’ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಪ್‌ಗೆ ಕಾಫಿ ಹಾಕುವ ಮೂಲಕ ಚಾಲನೆ ನೀಡಿದರು. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಸುಜಾಕುಶಾಲಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಶಾಸಕ ಪ್ರತಾಪಸಿಂಹ ನಾಯಕ ಇದ್ದಾರೆ   

ಮಡಿಕೇರಿ: ‘ಕಾಫಿ ಬೆಳೆಗಾರರಿಗೆ 10 ಎಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡುವ ಸೌಲಭ್ಯವನ್ನು ಅವರ ಹಿಂದಿನ ಬಾಕಿಯನ್ನು ಪರಿಗಣಿಸದೇ ನೀಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ‘ಫಲಾನುಭವಿಗಳ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘ಹಿಂದಿನ ಸರ್ಕಾರ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿತು. ಅವರು ನೀಡಿದ ‘ಭಾಗ್ಯ’ಗಳು ಜನರಿಗೆ ತಲುಪಲೇ ಇಲ್ಲ. ಆದರೆ, ನಮ್ಮ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ₹100 ಕೋಟಿ ಮೊತ್ತದ ಕೊಡಗಿನ ಪ್ಯಾಕೇಜನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ₹10 ಕೋಟಿಯನ್ನು ಕೊಡವ ಜನಾಂಗದ ಅಭಿವೃದ್ಧಿಗೆ ಮೀಸಲಿಡಲು ತೀರ್ಮಾನಿಸಿರುವೆ. ಬೆಂಗಳೂರಿನಲ್ಲಿ ಕೊಡವ ಸಮಾಜದ ಒಕ್ಕೂಟಕ್ಕೆ 7 ಎಕರೆ ಭೂಮಿಯನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಲಾಗಿದೆ. ಮೈಸೂರು– ಕುಶಾಲನಗರ ಚತುಷ್ಪಥ ಹೆದ್ದಾರಿ ಅಭಿವೃದ್ಧಿಗೆ ಪ್ರಧಾನಮಂತ್ರಿ ಮೋದಿ ಅವರು ಈಗಾಗಲೇ ಚಾಲನೆ ನೀಡಿದ್ದಾರೆ’ ಎಂದರು.

ADVERTISEMENT

‘ಇದೊಂದು ಆತ್ಮವಿಶ್ವಾಸ ತುಂಬುವ ಸಮ್ಮೇಳನ. ಪ್ರವಾಸೋದ್ಯಮದ ಮೈಸೂರು ಸರ್ಕೀಟ್ ಜತೆ ಕೊಡಗು ಜಿಲ್ಲೆಯನ್ನೂ ಸೇರ್ಪಡೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಜೇನು ನನಗೆ ಕಚ್ಚಲಿ ಅದರ ತುಪ್ಪ ತುಳಿತಕ್ಕೆ ಒಳಗಾದವರಿಗೆ ಸಿಗಲಿ ಎಂದು ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿದೆ’ ಎಂದೂ ಹೇಳಿದರು.

‘ಜನರನ್ನು ಯಾಮಾರಿಸಲು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಡುತ್ತಿದೆ. ಅದು ಕೇವಲ ಬೋಗಸ್ ಕಾರ್ಡ್ ಅಥವಾ ವಿಸಿಟಿಂಗ್ ಕಾರ್ಡ್. ಎಲ್ಲರನ್ನು ಎಲ್ಲ ಸಮಯದಲ್ಲೂ ಮೋಸ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಅವರು ಅರಿತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಇದೇ ವೇಳೆ ಅವರು ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಲವು ಕಾಮಗಾರಿಗಳನ್ನು ಉದ್ಘಾಟಿಸಿದರು. ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಎಂ.ಪಿ.ಸುಜಾ ಕುಶಾಲಪ್ಪ, ಪ್ರತಾಪ್‍ಸಿಂಹ ನಾಯಕ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚೆನ್ನಿಲ ತಿಮ್ಮಪ್ಪ ಶೆಟ್ಟಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.