ADVERTISEMENT

ಕ್ರೀಡಾಕೂಟದ ಸುಗ್ಗಿ; ಮೈದಾನಕ್ಕೆ ಬರ

ಕ್ರೀಡಾಂಗಣ ಸಜ್ಜುಗೊಳಿಸುವುದೇ ದೊಡ್ಡ ಸವಾಲು

ಸಿ.ಎಸ್.ಸುರೇಶ್
Published 16 ಮಾರ್ಚ್ 2023, 5:09 IST
Last Updated 16 ಮಾರ್ಚ್ 2023, 5:09 IST
ಮಾಳೇಟಿರ ಶ್ರೀನಿವಾಸ್,
ಮಾಳೇಟಿರ ಶ್ರೀನಿವಾಸ್,   

ನಾಪೋಕ್ಲು: 23ನೇ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವಕ್ಕೆ ನಾಲ್ಕುನಾಡು ಸಜ್ಜಾಗುತ್ತಿರುವಂತೆ ಉತ್ತಮ ಕ್ರೀಡಾಂಗಣ ನಿರ್ಮಿಸುವ ಗುರುತರ ಜವಾಬ್ದಾರಿಯನ್ನು ಸಾರಥ್ಯ ವಹಿಸಿದ್ದ ಅಪ್ಪಚೆಟ್ಟೋಳಂಡ ಕುಟುಂಬ ಹೊತ್ತಿದ್ದು ಮೂರು ಮೈದಾನಗಳು ನಿರ್ಮಾಣಗೊಳ್ಳುತ್ತಿವೆ.

ಮಾರ್ಚ್ 18ರಿಂದ ಆರಂಭಗೊಂಡು ಸುಮಾರು ಒಂದು ತಿಂಗಳ ಕಾಲ ಅದ್ಧೂರಿ ಹಾಕಿ ಉತ್ಸವ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿವೆ.

ವಿಜೃಂಭಣೆಯ ಹಾಕಿ ಉತ್ಸವಕ್ಕೂ ಮುನ್ನ ಮುಸ್ಲಿಂ ಕಪ್ ಕ್ರಿಕೆಟ್ ಇದೇ ಮೈದಾನದಲ್ಲಿ ನಡೆದಿತ್ತು. ಹಾಕಿ ಉತ್ಸವದ ಬಳಿಕ 21ನೇ ವರ್ಷದ ಬಾಳೆಯಡ ಕಪ್ ಕ್ರಿಕೆಟ್ ಟೂರ್ನಿಗೂ ಇದೇ ಕ್ರೀಡಾಂಗಣ ಸಜ್ಜಾಗುತ್ತಿದೆ. ಕೊಡವ ಕಪ್, ಗೌಡ ಕಪ್, ಮುಸ್ಲಿಂ ಕಪ್, ಹಿಂದೂ ಕಪ್, ಗೊಲ್ಲ ಕಪ್, ಐರಿ ಕಪ್… ಹೀಗೆ ಪ್ರತಿಯೊಂದು ಜನಾಂಗದವರು ತಮ್ಮ ತಮ್ಮ ಸಮು ದಾಯದವರನ್ನು ಒಗ್ಗೂಡಿಸಿ ದೊಡ್ಡ ದೊಡ್ಡ ಕ್ರೀಡಾಕೂಟಗಳನ್ನು ಇದೇ ಕ್ರೀಡಾಂಗಣದಲ್ಲಿ ಆಯೋಜಿಸುತ್ತಿವೆ. ಒಬ್ಬರ ನಂತರ ಒಬ್ಬರಂತೆ ಎಲ್ಲರೂ ಸಾಲುಗಟ್ಟಿ ಕ್ರೀಡೆಗಳನ್ನು ನಡೆಸುವಂತಹ ಸ್ಥಿತಿ ಇದೆ.

ADVERTISEMENT

ಕ್ರೀಡಾಕೂಟವನ್ನು ಆಯೋಜಿಸಲು ಬೇಕಾದ ಅಗತ್ಯ ಸೌಕರ್ಯಗಳುಳ್ಳ ಕ್ರೀಡಾಂಗಣವೇ ಇಲ್ಲದಿರುವುದು ಕ್ರೀಡಾ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡಿದೆ. ಪ್ರತಿವರ್ಷ ಹಾಕಿ ಉತ್ಸವ ವನ್ನು ಆಯೋಜಿಸಲು ವಿವಿಧ ಕೊಡವ ಕುಟುಂಬಗಳು ತಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸು ತ್ತವೆ. ವ್ಯವಸ್ಥಿತ ಕ್ರೀಡಾಂಗಣವನ್ನು ನಿರ್ಮಿಸುವುದೇ ಕ್ರೀಡಾಕೂಟದ ಆಯೋಜಕರಿಗೆ ದೊಡ್ಡ ಸವಾಲು ಎನಿಸಿದೆ.

ನಾಲ್ಕುನಾಡು ವ್ಯಾಪ್ತಿಗೆ ಒಳಪಟ್ಟ ನಾಪೋಕ್ಲು ಬಳಿಯ ಚೆರಿಯ ಪರಂಬುವಿನಲ್ಲಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಸದ್ಯದ ಮಟ್ಟಿಗೆ ವಾರ್ಷಿಕ ಕ್ರೀಡಾಕೂಟಗಳಿಗೆ ಲಭ್ಯವಾಗುತ್ತಿದೆ. ಇನ್ನುಳಿದಂತೆ ಸುತ್ತಮುತ್ತಲ ಯಾವ ಭಾಗದಲ್ಲಿಯೂ ಉತ್ತಮ ಕ್ರೀಡಾಂಗಣಗಳು ಇಲ್ಲ. ಶಾಲಾ- ಕಾಲೇಜುಗಳ ಆಟದ ಮೈದಾನಗಳು ಹೊರತುಪಡಿಸಿ ಕ್ರೀಡಾಂಗಣಗಳು ಇಲ್ಲದಿರುವುದು ಕ್ರೀಡಾಕೂಟಗಳ ಆಯೋಜಕರಿಗೆ ತೊಡಕೆನಿಸಿದೆ. ಸಮೀಪದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲೂ ಪ್ರತಿವರ್ಷ ಹಲವು ವಾರ್ಷಿಕ ಕ್ರೀಡಾಕೂಟಗಳು ಜರುಗುತ್ತವೆ.

ವಿವಿಧ ಜನಾಂಗದವರು ಹಾಕಿ, ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳನ್ನು ಏರ್ಪಡಿಸಿ ಸಂಭ್ರಮಿಸುತ್ತಾರೆ. ಇದರೊಂದಿಗೆ ಗ್ರಾಮೀಣ ಕ್ರೀಡಾಕೂಟಗಳಿಗೂ ಈ ಕ್ರೀಡಾಂಗಣಗಳು ವೇದಿಕೆ ಆಗುತ್ತಿವೆ. ಪ್ರತಿಯೊಂದು ಕುಟುಂಬದವರು ತಮ್ಮ ಜನಾಂಗಗಳನ್ನು ಒಗ್ಗೂಡಿಸಿ ಕ್ರೀಡಾಕೂಟ ನಡೆಸುತ್ತಿರುವುದು ವಿಶೇಷವೆನಿಸಿದೆ.

ಕೊಡಗಿನಲ್ಲಿ ಈ ಹಿಂದೆ ಕೈಲು ಮುಹೂರ್ತದಂತಹ ಮನೋರಂಜನಾ ಹಬ್ಬಗಳಲ್ಲಿ ಗ್ರಾಮೀಣ ಕ್ರೀಡಾ ಕೂಟವನ್ನು ಏರ್ಪಡಿಸಲಾಗುತ್ತಿತ್ತು. ಗ್ರಾಮಗಳಲ್ಲಿ ಎಲ್ಲ ಜನಾಂಗದವರು ಒಗ್ಗೂಡಿ ಗ್ರಾಮೀಣ ಕ್ರೀಡಾಕೂಟವನ್ನು ನಡೆಸುತ್ತಿದ್ದರು. ಇತ್ತೀಚಿನ ಬೆಳವಣಿಗೆ ಯಲ್ಲಿ ಕ್ರೀಡಾಕೂಟ ವಿಶೇಷ ಮಹತ್ವವನ್ನು ಪಡೆದುಕೊಂಡಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ವಿಭಿನ್ನ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ವಿಶೇಷವಾಗಿ ಮಳೆಗಾಲದಲ್ಲಿ ಕೆಸರು ಗದ್ದೆ ಕ್ರೀಡಾ ಕೂಟಗಳು ಕೆಲವು ಭಾಗಗಳಲ್ಲಿ ಜನಪ್ರಿಯವಾಗುತ್ತಿದೆ. ಬೇಸಿಗೆ ಬಂತೆಂದರೆ ಗ್ರಾಮೀಣ ಭಾಗಗಳಲ್ಲಿ ಕ್ರೀಡಾಕೂಟಗಳ ಸುಗ್ಗಿ. ವಿಶೇಷವಾಗಿ ನಾಲ್ಕುನಾಡಿನಲ್ಲಿ ವೈವಿಧ್ಯಮಯ ಕ್ರೀಡಾಕೂಟಗಳು ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ನಡೆಯುತ್ತಿರುತ್ತವೆ.

ನಾಪೋಕ್ಲುವಿನಂತಹ ಪ್ರದೇಶ ಗಳು ಗ್ರಾಮೀಣ ಜನರಿಗೆ ಅನುಕೂಲಕರ ವಾದಂತಹ ಸ್ಥಳವಾಗಿದ್ದು ಇಲ್ಲಿನ ಕ್ರೀಡಾಂಗಣ ಹೆಚ್ಚಿನ ಮಹತ್ವ ಪಡೆದು ಕೊಂಡಿದೆ. ಆದರೆ, ಪ್ರತಿವರ್ಷ ಕೊಡವ ಹಾಕಿ ಉತ್ಸವದ ಸಂದರ್ಭ ದಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಕ್ರೀಡಾಂಗಣವನ್ನು ವ್ಯವಸ್ಥೆಗೊಳಿ ಸುವುದು ದೊಡ್ಡ ಸವಾಲು ಎನಿಸಿದೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಬೇಕಾಗಿದೆ. ಜನಾಕರ್ಷಣೆಯ ದೊಡ್ಡ ದೊಡ್ಡ ಕ್ರೀಡಾಕೂಟಗಳು ನಡೆದರೂ, ಜಿಲ್ಲೆಯಲ್ಲಿ ವ್ಯವಸ್ಥಿತ ಕ್ರೀಡಾಂಗಣ ಇಲ್ಲದಿರುವುದು ಕ್ರೀಡಾ ಪ್ರೇಮಿಗಳಲ್ಲಿ ಬೇಸರ ತರಿಸಿದೆ. ಪ್ರತಿವರ್ಷ ಬೇರೆ ಬೇರೆ ಕುಟುಂಬದವರು ಹಾಕಿ ಟೂರ್ನಿಯನ್ನು ನಡೆಸುತ್ತಾರೆ. ಪ್ರತಿ ವರ್ಷವೂ ಆಟದ ಮೈದಾನವನ್ನು ಸಜ್ಜುಗೊಳಿಸುವುದಕ್ಕೆ ಹೆಚ್ಚು ವ್ಯಯವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.