ADVERTISEMENT

ಕೊಡವರು ಬಂದೂಕು ಹೊಂದುವ ವಿನಾಯಿತಿ ಪ್ರಶ್ನಿಸಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 21:03 IST
Last Updated 7 ಜುಲೈ 2021, 21:03 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೊಡವ ಸಮುದಾಯ ಮತ್ತು ಜಮ್ಮಾ ಹಿಡುವಳಿದಾರರು ಬಂದೂಕು ಹೊಂದಲು ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳಿಗೆ ವಿನಾಯಿತಿ ನೀಡಿ 2019ರ ಅಕ್ಟೋಬರ್‌ನಲ್ಲಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್ ನೋಡಿದೆ.

ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಚೇತನ್ ವೈ.ಕೆ. ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ‌

‘ಕೊಡವರ ನಿಷ್ಠೆ ಮೆಚ್ಚಿ ಬ್ರಿಟಿಷರು ಬಂದೂಕು ಪರವಾನಗಿ ನೀಡಿದ್ದರು. ಕೊಡವ ಸಮುದಾಯದವರು ಮತ್ತು ಜಮ್ಮಾ ಹಿಡುವಳಿದಾರರು ಹೇಳಿದಂತೆ ಅದು ಸಂಪ್ರದಾಯ ಅಥವಾ ಸಂಸ್ಕೃತಿ ಆಧಾರದಲ್ಲಿ ದೊರೆತ ವಿನಾಯಿತಿ ಅಲ್ಲ’ ಎಂದು ಅರ್ಜಿದಾರರು ವಾದಿಸಿದ್ದಾರೆ.

ADVERTISEMENT

‘ಬ್ರಿಟಿಷರನ್ನು ಒಪ್ಪಿಕೊಳ್ಳದ ಸಮುದಾಯಗಳಿಗೆ ಎಲ್ಲಾ ಹಕ್ಕುಗಳಿಂದ ವಂಚಿತಗೊಳಿಸಲಾಯಿತು. ಅವರನ್ನು ಒಪ್ಪಿಕೊಂಡವರಿಗೆ ಎಲ್ಲಾ ಸವಲತ್ತುಗಳನ್ನು ನೀಡಲಾಯಿತು. ಬ್ರಿಟಿಷರ ಆಡಳಿತ ಮುಗಿದು 73 ವರ್ಷಗಳು ಕಳೆದರೂ ವಿನಾಯಿತಿ ಮುಂದುವರಿದಿದೆ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಬಂದೂಕು ಹೊಂದುವ ವಿನಾಯಿತಿ ನೀಡಿ 1963ರ ಜುಲೈ 6ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಈ ಹಿಂದೆ ಇದೇ ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆ ಅರ್ಜಿ ವಿಚಾರಣೆ ಬಾಕಿ ಇರುವಾಗಲೇ 2019ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಅಧಿಸೂಚನೆ ಹೊರಡಿಸಿ ವಿನಾಯಿತಿಯನ್ನು 2029ರ ಅಕ್ಟೋಬರ್‌ 31ರ ತನಕ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.