ADVERTISEMENT

ಪಾಡಿ ಇಗ್ಗುತ್ತಪ್ಪಗೆ ಕಲಾಡ್ಚ ಉತ್ಸವದ ಸಂಭ್ರಮ

ಎತ್ತು ಪೋರಾಟ, ದೇವರ ನೃತ್ಯಬಲಿ, ನೆರವೇರಿದ ಹಲವು ಧಾರ್ಮಿಕ ಕೈಂಕರ್ಯಗಳು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 7:35 IST
Last Updated 8 ಮಾರ್ಚ್ 2023, 7:35 IST
ನಾಪೋಕ್ಲು ಸಮೀಪದ ಕಕ್ಕಬೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮಂಗಳವಾರ ಕಲಾಡ್ಚ ವಾರ್ಷಿಕ ಉತ್ಸವದಲ್ಲಿ ದೇವರ ನೃತ್ಯಬಲಿ ನೆರವೇರಿತು
ನಾಪೋಕ್ಲು ಸಮೀಪದ ಕಕ್ಕಬೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮಂಗಳವಾರ ಕಲಾಡ್ಚ ವಾರ್ಷಿಕ ಉತ್ಸವದಲ್ಲಿ ದೇವರ ನೃತ್ಯಬಲಿ ನೆರವೇರಿತು   

ನಾಪೋಕ್ಲು: ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮಂಗಳವಾರ ಶ್ರದ್ಧಾಭಕ್ತಿಯಿಂದ ಕಲ್ಲಾಡ್ಚ ಉತ್ಸವ ನೆರವೇರಿತು.

ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ತಲುಪಿ ಎತ್ತುಪೋರಾಟ ವನ್ನು ಒಪ್ಪಿಸಲಾಯಿತು. ನಂತರ, ಭಕ್ತರಿಂದ ತುಲಾಭಾರ ಸೇವೆ ಸೇರಿದಂತೆ ಹಾಲು ಬಲಿವಾಡು ಹರಕೆ ಇನ್ನಿತರ ಪೂಜೆಗಳನ್ನು ನೆರವೇರಿಸಲಾಯಿತು.

ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ದೇವರ ಪ್ರಾರ್ಥನೆಯ ಬಳಿಕ ದೇವರ ನೃತ್ಯ ಬಲಿ ಭಕ್ತರನ್ನು ಆಕರ್ಷಿಸಿತು.

ADVERTISEMENT

ಎತ್ತು ಪೋರಾಟದೊಂದಿಗೆ ತಕ್ಕ ಮುಖ್ಯಸ್ಥರು ಭಕ್ತರು ಮಧ್ಯಾಹ್ನ ಮಲ್ಮ ಬೆಟ್ಟಕ್ಕೆ ಶ್ರದ್ಧಾಭಕ್ತಿಯಿಂದ ತೆರಳಿದರು. ಪೇರೂರು ಹಾಗೂ ನೆಲಜಿ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಎತ್ತುಪೋರಾಟದೊಂದಿಗೆ ಮಲ್ಮಕ್ಕೆ ಆಗಮಿಸಿದರು. ಅರ್ಚಕರು ಶುದ್ಧ ಕಳಸ ಪೂಜಾ ಕಾರ್ಯಗಳನ್ನು ನೆರವೇರಿಸಿ ಎತ್ತುಪೋರಾಟ ದುಡಿಕೊಟ್ಟ್ ಪಾಟ್ ನೆರವೇರಿತು.

ಸಂಜೆ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕಲಾಡ್ಚ ವಾರ್ಷಿಕ ಉತ್ಸವ ಸಂಭ್ರಮದಿಂದ ಜರುಗಿ ಸಂಪನ್ನಗೊಂಡಿತು. ಹಬ್ಬದ ಪ್ರಯುಕ್ತ ದೇವಾಲಯವನ್ನು ವಿಶೇಷವಾಗಿ ವಿದ್ಯುತ್ ದೀಪ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ತಕ್ಕ ಮುಖ್ಯಸ್ಥರು, ಭಕ್ತಜನ ಸಂಘ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಕ್ತರು ಪಾಲ್ಗೊಂಡಿದ್ದರು.

ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು. ಪ್ರಾತಃಕಾಲದ ಪೂಜೆ, ಭಕ್ತರ ತುಲಾಭಾರ ಸೇವೆ, ಎತ್ತು ಪೋರಾಟ, ಅನ್ನ ಸಂತರ್ಪಣೆ ನೆರವೇರಿತು.

ಮಧ್ಯಾಹ್ನ ನಡೆದ ದೇವರ ನೃತ್ಯಬಲಿಯನ್ನು ಅಧಿಕ ಸಂಖ್ಯೆಯ ಭಕ್ತರು ವೀಕ್ಷಿಸಿದರು. ನೆಲಜಿ ಇಗ್ಗುತಪ್ಪ ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾದ ಬದ್ಧಂಜೆಟ್ಟಿರ ನಾಣಯ್ಯ, ಬಾಳಿಯಡ ಕುಂಞಪ್ಪ, ಮುಕ್ಕಾಟಿರ ವಿನಯ, ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.