ADVERTISEMENT

ಸುಂಟಿಕೊಪ್ಪ: ಕಾರಣಿಕ ದೈವಗಳ ನೇಮೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 4:19 IST
Last Updated 6 ಮಾರ್ಚ್ 2023, 4:19 IST
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಉದ್ದಿಬಾಣೆ ಮಠದಲ್ಲಿ ಶನಿವಾರ ರಾತ್ರಿ ಜೋಡಿ ಪಾಷಾಣಮೂರ್ತಿ (ಕಲ್ಲುರ್ಟಿ) ದೈವಗಳ ನೇಮೋತ್ಸವ ನಡೆಯಿತು
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಉದ್ದಿಬಾಣೆ ಮಠದಲ್ಲಿ ಶನಿವಾರ ರಾತ್ರಿ ಜೋಡಿ ಪಾಷಾಣಮೂರ್ತಿ (ಕಲ್ಲುರ್ಟಿ) ದೈವಗಳ ನೇಮೋತ್ಸವ ನಡೆಯಿತು   

ಸುಂಟಿಕೊಪ್ಪ: ಇಲ್ಲಿನ‌ ಹರದೂರು ಗ್ರಾಮದ ಉದ್ದಿಬಾಣೆ ಮಠದಲ್ಲಿ ಶನಿವಾರ‌ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೆ ಶ್ರದ್ಧಾಭಕ್ತಿಯಿಂದ ಧರ್ಮ ದೈವಗಳ ನೇಮೋತ್ಸವವು ನಡೆಯಿತು.

ಶನಿವಾರ ಬೆಳಿಗ್ಗೆ ಗಣಹೋಮ ಮತ್ತು ಸತ್ಯ ನಾರಾಯಣ ಪೂಜೆ, ರಾತ್ರಿ ಭಂಡಾರ ತೆಗೆಯುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರಕಿತು. 11 ಗಂಟೆಯ ನಂತರ ಜೋಡಿ ಕಲ್ಲುರ್ಟಿ ದೈವದ ನೇಮವು ನಡೆದು ಭಕ್ತರಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ತನ್ನ ಕಾರಣಿಕವನ್ನು ಸಾಬೀತುಪಡಿಸಿತು.

ಭಾನುವಾರ ಬೆಳಿಗ್ಗೆ 5.30ಕ್ಕೆ ಪಂಜುರ್ಲಿ ದೈವದ ನೇಮ, ಬೆಳಿಗ್ಗೆ 7 ಗಂಟೆಗೆ ಗುಳಿಗ ದೈವದ ಕೋಲ, 11 ಗಂಟೆಗೆ ಜೋಡಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ನಂತರ ಭಕ್ತರು ಕೊರಗಜ್ಜನಲ್ಲಿ ಬೇಡಿಕೆ ಸಲ್ಲಿಸಿದಾಗ ಈ ಸಮಯದೊಳಗೆ ಸಮಸ್ಯೆ ಪರಿಹರಿಸಿಕೊಡುವುದಾಗಿ ಮಾತು‌ ನೀಡಿದ್ದಲ್ಲದೇ, ಮಾತಿನಂತೆ ತಮ್ಮ ಕೆಲಸ ಕಾರ್ಯಗಳು ನೆರವೇರಿದ್ದರಿಂದ ದೈವ ಹರಕೆಯನ್ನು ಒಪ್ಪಿಸಲು ಹೋಬಳಿ ವ್ಯಾಪ್ತಿಯ ನೂರಾರು ಭಕ್ತರು ಆಗಮಿಸಿದ್ದರು.

ADVERTISEMENT

ಸಂಜೆ 4 ಗಂಟೆಗೆ ಭಂಡಾರ ಗರಡಿಯಿಂದ‌ ಸ್ವ–ಸ್ಥಾನಕ್ಕೆ ತೆಗೆದುಕೊಂಡು ಹೋಗುವುದರ ಮೂಲಕ ನೇಮೋತ್ಸವ ತೆರೆ ಕಂಡಿತು.

ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಸುಂಟಿಕೊಪ್ಪ, ಹರದೂರು, ಮಾದಾಪುರ, ಮಡಿಕೇರಿ, ಕೊಡಗರಹಳ್ಳಿ, ಪನ್ಯ,ಸುಳ್ಯ, ಮಂಗಳೂರು, ಬೆಂಗಳೂರು, ಕುಶಾಲನಗರ ಭಾಗದ ಭಕ್ತರು ಆಗಮಿಸಿ‌ ಕಾರಣಿಕ ದೈವಗಳ ನೇಮವನ್ನು ವೀಕ್ಷಿಸಿದರು.

ಮುಖ್ಯಸ್ಥರಾದ ಮೋಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಶಾಂತಪ್ಪ ಪೂಜಾರಿ, ಪದ್ಮನಾಭ ಸುಳ್ಯ, ದೇವಕ್ಕಿ ಮಣಿಮುಖೇಶ್, ಜಗದೀಶ್, ಬೇಬಿ, ಶೇಖರ್ ಪೂಜಾರಿ, ಬಿ.ಟಿ.ರಮೇಶ್ ಪೂಜಾರಿ, ವೆಂಕಪ್ಪ ಪೂಜಾರಿ, ದೇವಪ್ಪ, ಸತೀಶ್, ನಾಗೇಶ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.