ADVERTISEMENT

ಕುಶಾಲನಗರ: ಪ್ರವಾಹದ ಭೀತಿ, ಹೆದ್ದಾರಿಯಲ್ಲಿ ಬಿರುಕು

ಕುಶಾಲನಗರ ನಿವಾಸಿಗಳಿಗೆ ಪ್ರವಾಹದ ಭೀತಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 17:39 IST
Last Updated 24 ಜುಲೈ 2021, 17:39 IST
ಮಡಿಕೇರಿ – ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ಎಂಬಲ್ಲಿ ರಸ್ತೆಯಲ್ಲಿ ಬಿರುಕು
ಮಡಿಕೇರಿ – ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ಎಂಬಲ್ಲಿ ರಸ್ತೆಯಲ್ಲಿ ಬಿರುಕು   

ಮಡಿಕೇರಿ: ಕೊಡಗಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಮಡಿಕೇರಿ – ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ಎಂಬಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಬೃಹತ್‌ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

‌ಮಡಿಕೇರಿ –ಸಂಪಾಜೆ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275ರ ಕಾಟಕೇರಿ ಬಳಿ ಮಣ್ಣು ಕುಸಿದು, ರಸ್ತೆಯಲ್ಲಿ ಬಿರುಕು ಕಾಣಿಸಿದೆ. ಹೆದ್ದಾರಿ ಕುಸಿಯುವ ಆತಂಕವಿದೆ.

ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ ತಗ್ಗಿದ್ದು, ಹಲವು ಕಡೆ ಮನೆಗಳು ಕುಸಿದಿವೆ. ಹೇಮಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ದೇವಾಲಯದ ಮೆಟ್ಟಿಲು ಮುಳುಗಿದ್ದು, ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ಭತ್ತ, ಅಡಿಕೆ, ಕಾಫಿ ತೋಟಗಳಲ್ಲಿ ನೀರು ನಿಂತು, ಬೆಳೆ ನಷ್ಟ ಭೀತಿ ಎದುರಾಗಿದೆ. ಆಲೂರು ತಾಲ್ಲೂಕಿನ ಮಡಬಲು ಗ್ರಾಮದಲ್ಲಿ ಶುಂಠಿ ಗದ್ದೆಗೆ ನೀರು ನುಗ್ಗಿದೆ.

ADVERTISEMENT

ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ. 30 ಸಾವಿರ ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ. ನಂಜನಗೂಡಿನಲ್ಲಿ ಪ್ರವಾಹ ಆತಂಕ ತಲೆದೋರಿದೆ. ಹದಿನಾರು ಕಾಲು ಮಂಟಪ ಮುಳುಗಡೆಯಾಗಿದೆ. ಶ್ರೀಕಂಠೇಶ್ವರ ದೇವಸ್ಥಾನದ ಸ್ನಾನಘಟ್ಟದ ಮೆಟ್ಟಿಲುಗಳವರೆಗೆ ನೀರು ಬಂದಿದ್ದು, ಪುಣ್ಯಸ್ನಾನ ನಿರ್ಬಂಧಿಸಲಾಗಿದೆ.

ಏಳು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್‌’

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜುಲೈ 25ರಂದು ವ್ಯಾಪಕ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಆರೆಂಜ್ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಇದೇ 27ರವರೆಗೆ ಹೆಚ್ಚು ಮಳೆಯಾ ಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲೂಭಾರಿಮಳೆಯಾಗುವ ಸೂಚನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.