ADVERTISEMENT

ಆಸ್ಕರ್ ಬದುಕು ಇತರರಿಗೆ ಮಾದರಿ: ಕೊಡಗು ಜಿಲ್ಲಾ ಕಾಂಗ್ರೆಸ್‌ನಿಂದ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 14:00 IST
Last Updated 15 ಸೆಪ್ಟೆಂಬರ್ 2021, 14:00 IST
ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿದರು
ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿದರು   

ಮಡಿಕೇರಿ: ರಾಜ್ಯಸಭಾ ಸದಸ್ಯ, ಸಜ್ಜನ ರಾಜಕಾರಣಿ ಆಸ್ಕರ್ ಫರ್ನಾಂಡಿಸ್‌ ಬದುಕು ಕಾಂಗ್ರೆಸ್ ಕಾರ್ಯಕರ್ತರಿಗೆ ಅಧ್ಯಯನವಾಗಲಿ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಸ್ಕರ್ ಫರ್ನಾಂಡಿಸ್‌ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಸರಳ ಮತ್ತು ಸಜ್ಜನಿಕೆಯ ರಾಜಕಾರಣದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪಕ್ಷ ನಿಷ್ಠೆ, ಬದ್ಧತೆ, ಸರಳ, ಸಜ್ಜನಿಕೆಯ ಗುಣ ಆಸ್ಕರ್ ಫರ್ನಾಂಡಿಸ್‌ ಅವರಂತಹ ಸಾಮಾನ್ಯ ಕಾರ್ಯಕರ್ತನನ್ನು ರಾಷ್ಟ್ರದ ಪ್ರಭಾವಿ ನಾಯಕನನ್ನಾಗಿ ರೂಪಿಸಿತು. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರ ಬೆಂಬಲಕ್ಕೆ ಸದಾ ಇರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಧರ್ಮಜಾ ಉತ್ತಪ್ಪ ತಿಳಿಸಿದರು.

ADVERTISEMENT

ಕೆಪಿಸಿಸಿ ಮುಖಂಡ ಟಿ.ಪಿ.ರಮೇಶ್ ಮಾತನಾಡಿ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ಧಿ ಆಸ್ಕರ್ ಫರ್ನಾಂಡಿಸ್‌ ಕಾಂಗ್ರೆಸ್‌ನ ಅಮರ್, ಅಕ್ಬರ್, ಆಂತೋಣಿ ತಂಡದ ಸದಸ್ಯರಾಗಿ ಖ್ಯಾತರಾಗಿದ್ದರು. ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದು ಬಣ್ಣಿಸಿದರು. ಮೈಸೂರು-ಬೆಂಗಳೂರು ದಶಪಥ ರಸ್ತೆ, ಕೊಂಕಣ ರೈಲ್ವೆಯ ಕೊಡುಗೆ ಕೂಡ ಆಸ್ಕರ್ ಅವರದ್ದು ಎಂದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ತೆನ್ನಿರ ಮೈನಾ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ನಗರಸಭೆ ಮಾಜಿ ಸದಸ್ಯ ಕೆ.ಟಿ.ಬೇಬಿ ಮ್ಯಾಥ್ಯೂ, ಕೆಪಿಸಿಸಿ ಸಂಯೋಜಕ ಎಚ್.ಎಂ.ನಂದಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಎಂ.ಎ.ಉಸ್ಮಾನ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ವೃತ್ತಿಪರ ಘಟಕದ ಜಿಲ್ಲಾ ಅಧ್ಯಕ್ಷ ಅಂಬೇಕಲ್ ನವೀನ್, ಸಾಮಾಜಿಕ ಜಾಲತಾಣದ ಜಿಲ್ಲಾ ಅಧ್ಯಕ್ಷ ಹೊಸೂರು ಸೂರಜ್, ನಗರಸಭಾ ಮಾಜಿ ಸದಸ್ಯರಾದ ಚುಮ್ಮಿ ದೇವಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.