ADVERTISEMENT

ಎಲ್ಲರ ಮನಸೆಳೆದ ‘ನಾಡ ಪೆದ ಆಶಾ’

62 ಅಂತರರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ಸಿನಿಮಾ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 5:10 IST
Last Updated 14 ಮಾರ್ಚ್ 2023, 5:10 IST
ಕೊಡವ ಚಲನಚಿತ್ರ ‘ನಾಡ ಪೆದ ಆಶಾ’ ಪಡೆದ ಪ್ರಶಸ್ತಿಗಳನ್ನು ಸೋಮವಾರ ಪತ್ರಿಕಾ ಭವನದಲ್ಲಿ ಪ್ರದರ್ಶಿಸಿದ ಚಿತ್ರ ತಂಡ. ಚಿತ್ರ ನಿರ್ಮಾಪಕರಾದ ಈರಮಂಡ ಹರಿಣಿ ವಿಜಯ್, ಕೊಟ್ಟುಕತ್ತಿರ ಯಶೋಧ ಪ್ರಕಾಶ್, ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಇದ್ದಾರೆ
ಕೊಡವ ಚಲನಚಿತ್ರ ‘ನಾಡ ಪೆದ ಆಶಾ’ ಪಡೆದ ಪ್ರಶಸ್ತಿಗಳನ್ನು ಸೋಮವಾರ ಪತ್ರಿಕಾ ಭವನದಲ್ಲಿ ಪ್ರದರ್ಶಿಸಿದ ಚಿತ್ರ ತಂಡ. ಚಿತ್ರ ನಿರ್ಮಾಪಕರಾದ ಈರಮಂಡ ಹರಿಣಿ ವಿಜಯ್, ಕೊಟ್ಟುಕತ್ತಿರ ಯಶೋಧ ಪ್ರಕಾಶ್, ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಇದ್ದಾರೆ   

ಮಡಿಕೇರಿ: ಕೊಡವ ಚಲನಚಿತ್ರ ‘ನಾಡ ಪೆದ ಆಶಾ’ ಇಲ್ಲಿಯವರೆಗೆ 62 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ವಿಕೆ 3 ಪಿಕ್ಚರ್ಸ್ ಬ್ಯಾನರ್‌ನಡಿ ಈರಮಂಡ ಹರಿಣಿ ವಿಜಯ್ ಮತ್ತು ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರ ನಿರ್ಮಾಣದಲ್ಲಿ ತಯಾರಾದ ಕೊಡವ ಕಾದಂಬರಿ ಆಧಾರಿತ, ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ಈ ಚಿತ್ರದ ತಂಡವು ಸೋಮವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಪ‍ಡೆದ ಪ್ರಶಸ್ತಿಗಳನ್ನು ಪ್ರದರ್ಶಿಸಿತು.

ಈ ವೇಳೆ ಮಾತನಾಡಿದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್, ‘ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಪರಿಸರದ ಮೇಲೆ ಬೆಳಕು ಚೆಲ್ಲಿರುವ ಮತ್ತು ಸ್ವಾವಲಂಬಿ ಮಹಿಳೆಯೊಬ್ಬಳು ಸಮಾಜಮುಖಿಯಾಗಿ ಸೇವೆ ಸಲ್ಲಿಸುವ ಕಥಾಹಂದರದ ಈ ಚಿತ್ರವು ಕೊಡವ ಭಾಷೆಯಲ್ಲಿದ್ದರೂ ಎಲ್ಲಾ ಜಾತಿ, ಮತ ಮತ್ತು ಬೇರೆ ಭಾಷೆಯವರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

ADVERTISEMENT

ಈ ಕೊಡವ ಸಿನಿಮಾ 2021ನೇ ಸಾಲಿನ ಕೊಡವ ಸಾಹಿತ್ಯ ಅಕಾಡಮಿ ಪ್ರಶಸ್ತಿ, 7ನೇ ಡೆಹ್ರಡೂನ್, 2ನೇ ಚಂಡಿಗಡ್, 27ನೇ ಕೊಲ್ಕತ್ತಾ, ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ, ಕರ್ನಾಟಕದ 2ನೇ ಮೈಸೂರು ದಸರಾ ಚಲನಚಿತ್ರೋತ್ಸವ-2022ರಲ್ಲೂ ಅಧಿಕೃತವಾಗಿ ಆಯ್ಕೆಗೊಂಡು ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿತ್ತು. ಹುಬ್ಬಳ್ಳಿಯಯಲ್ಲಿ ನಡೆದ 2ನೇ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ -2022 ದಲ್ಲಿ ‘ಬೆಸ್ಟ್ ಡೈರೆಕ್ಟರ್ ಅವಾರ್ಡ್’, ಬೆಂಗಳೂರಿನಲ್ಲಿ ನಡೆದ 3ನೇ ಅಂತರರಾಷ್ಟ್ರೀಯ ಪನೋ ರಮ ಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ’ಯನ್ನು ಗಳಿಸಿದೆ ಎಂದು ಮಾಹಿತಿ ನೀಡಿದರು.

ತಮಿಳುನಾಡುವಿನ ತಿರುನೆಲ್‍ವಲ್ಲಿ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬೆಸ್ಟ್ ಸ್ಟೋರಿ, ಬೆಸ್ಟ್ ಫಿಲಂ ಮೇಕರ್, ಜೂರಿ ಅವಾರ್ಡ್ ಹಾಗೂ ಬೆಸ್ಟ್ ಬಿಜಿಎಂ ಎಂಬ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದರು.

ಸಹ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ, ‘ಚಿತ್ರಕ್ಕೆ ದೊರೆತಿರುವ ಪ್ರಶಸ್ತಿಗಳು ಮತ್ತಷ್ಟು ಸಿನಿಮಾಗಳ ನಿರ್ಮಾಣಕ್ಕೆ ಹೊಸ ಸ್ಫೂರ್ತಿಯನ್ನು ತುಂಬಿದೆ. ಕೊಡವ ಸಿನಿಮಾವನ್ನು ಪ್ರತಿಯೊಬ್ಬರು ಕೊಡಗಿನ ಸಿನಿಮಾವೆಂದು ಸ್ವೀಕರಿಸಬೇಕು, ಕೇವಲ ಕೊಡವರಿಗಾಗಿ ಎಂದು ಭಾವಿಸಬಾರದು ಎಂದು ಮನವಿ ಮಾಡಿದರು.

‘ಮಾರ್ಚ್ 20ರಿಂದ 27ರವರೆಗೆ ‘ಪೊಮ್ಮಾಲೆ ಕೊಡಗ್’ ಚಿತ್ರವು ಜಿಲ್ಲೆಯಲ್ಲಿ ಪ್ರದರ್ಶನ ಕಾಣಲಿದೆ. 20ರಂದು ಬಾಳೆಲೆ ಕೊಡವ ಸಮಾಜ, 22 ಮತ್ತು 23ರಂದು ಮೂರ್ನಾಡು ಕೊಡವ ಸಮಾಜ, 25, 26 ಹಾಗೂ 27ರಂದು ನಾಪೋಕ್ಲು ಕೊಡವ ಸಮಾಜದಲ್ಲಿ ಬೆಳಿಗ್ಗೆ 11ಕ್ಕೆ, ಸಂಜೆ 4ಕ್ಕೆ ಹಾಗೂ ಸಂಜೆ 6.30 ಕ್ಕೆ ಪ್ರದರ್ಶನಗೊಳ್ಳಲಿದೆ’ ಎಂದು ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಿಳಿಸಿದರು.

'ನಾಡ ಪೆದ ಆಶಾ’ ಸಿನಿಮಾದ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.