ADVERTISEMENT

ಗೋಣಿಕೊಪ್ಪಲು: ‘ಕೊಡಗಿಗೆ ಪ್ರತ್ಯೇಕ ಸ್ಥಾನಮಾನ ಲಭಿಸಲಿ’

16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ; ಸಾಧಕರಿಗೆ ಸನ್ಮಾನ: ಎಂಎಲ್‌ಸಿ ಎ.ಎಚ್‌. ವಿಶ್ವನಾಥ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 4:24 IST
Last Updated 6 ಮಾರ್ಚ್ 2023, 4:24 IST
ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಸಾಧಕರಾದ ದೀಕ್ಷಿತ್, ಡಾ.ಎಂ.ಜಿ. ನಾಗರಾಜ್, ರಾಣಿ ಮಾಚಯ್ಯ, ಸೋಮೆಯಂಡ ಗಣೇಶ್ ತಿಮ್ಮಯ್ಯ, ನಮೃತಾ ಅವರನ್ನು ಗೌರವಿಸಲಾಯಿತು
ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷ ಸಾಧಕರಾದ ದೀಕ್ಷಿತ್, ಡಾ.ಎಂ.ಜಿ. ನಾಗರಾಜ್, ರಾಣಿ ಮಾಚಯ್ಯ, ಸೋಮೆಯಂಡ ಗಣೇಶ್ ತಿಮ್ಮಯ್ಯ, ನಮೃತಾ ಅವರನ್ನು ಗೌರವಿಸಲಾಯಿತು   

ಗೋಣಿಕೊಪ್ಪಲು: ‘ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು ವಿಭಿನ್ನವಾದ ಭಾಷೆ, ಸಂಸ್ಕೃತಿ ಮತ್ತು ಪರಿಸರ ಹೊಂದಿರುವುದರಿಂದ ಇದಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗುವುದು ನ್ಯಾಯ ಸಮ್ಮತವಾಗಿದೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಕೊಡಗಿಗೆ ಪ್ರತ್ಯೇಕ ಸ್ಥಾನಮಾನ ಲಭಿಸಿದರೆ ಅನುದಾನವೂ ಹೆಚ್ಚಲಿದೆ. ಇದು ಅಭಿವೃದ್ಧಿಗೆ ಪೂರಕವಾಗಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇರುವುದರಿಂದ ಅನುಕೂಲಕರ ವಾತಾವರಣವಿದೆ. ಇದಕ್ಕಾಗಿ ತೀವ್ರ ಪ್ರಯತ್ನ ಅಗತ್ಯ’ ಎಂದರು.

ADVERTISEMENT

ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕೀಯ ಗೋಷ್ಠಿಗಳನ್ನೂ ಆಯೋಜಿಸಬೇಕು. ರಾಜಕೀಯವನ್ನು ಮೈಲಿಗೆಯಾಗಿ ನೋಡಬಾರದು. ಇದರಿಂದ ಜನತಂತ್ರ ವ್ಯವಸ್ಥೆ ಹದಗೆಟ್ಟು ನಕಾರಾತ್ಮಕ ಚಿಂತನೆಗಳು ಮೂಡಲಿವೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಪರಸ್ಪರ ದೂಷಿಸುವುದು, ವೋಟು ನೋಟಿನ ಹಿಂದೆ ಓಡುವುದೇ ಆಗಿದೆ. ಇದರಿಂದ ಜನತಂತ್ರ ವ್ಯವಸ್ಥೆಯನ್ನು ಉಜ್ವಲಗೊಳಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಗ್ರೀಕ್‌ನಲ್ಲಿ ಮತದಾನ ಮಾಡುವುದಕ್ಕೂ ಮುನ್ನ ಅಲ್ಲಿನ ಜನ ಅಥೆನ್ಸ್ ದೇವತೆಯನ್ನು ಪೂಜಿಸಿ ದೇಶಕ್ಕೆ ಒಳಿತು ಮಾಡು ಎಂದು ಪ್ರಾರ್ಥಿಸಿ ಮತದಾನ ಮಾಡುತ್ತಾರೆ. ಆದರೆ, ನಮ್ಮ ದೇಶದಲ್ಲಿ ಮತದಾರ ಮತ್ತು ರಾಜಕಾರಣಿ ನೋಟಿನ ಹಿಂದೆ ಓಡುತ್ತಾರೆ. ಮತದಾರ ಮತ್ತು ರಾಜಕಾರಣಿ ಇಬ್ಬರೂ ಭ್ರಷ್ಟರಾಗಿದ್ದಾರೆ. ಇಂಥ ವ್ಯವಸ್ಥೆಯನ್ನು ಹೋಗಲಾಡಿಸಲು ಎಲ್ಲರೂ ಸಂಘಟಿತರಾಗಬೇಕು’ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮ್ಮೇಳನದಲ್ಲಿ ಭಾನುವಾರ ಸನ್ಮಾನಿಸಲಾಯಿತು.

ಸಿ.ಎನ್.ವಿಶ್ವನಾಥ್. ಎನ್.ಜಿ.ಕಾಮತ್, ಚಿರಿಯಪಂಡ ಉಮೇಶ್ ಉತ್ತಪ್ಪ, ಕೆ.ಟಿ.ಬೇಬಿ ಮ್ಯಾಥ್ಯೂ, ಶ್ರೀನಿವಾಸ್ ನಾಯ್ಡು, ಉಂಬಯಿ, ಜಿ.ರಮೇಶ್, ಸಿ.ಎಸ್.ಸತೀಶ್, ಎಚ್.ಎನ್.ಮಹೇಶ್, ಎಂ.ಎಂ.ಲಿಯಾಕತ್ ಆಲಿ, ಪ್ರೇಮಾಂಜಲಿ, ಶ್ರೀಧರ ನೆಲ್ಲಿತ್ತಾಯ, ಚೊಕ್ಕಾಡಿ ಅಪ್ಪಯ್ಯ, ಅಮೃತ್ ನಾಣಯ್ಯ, ವೆಂಕಟೇಶ ಪೂಜಾರಿ ಸನ್ಮಾನ ಸ್ವೀಕರಿಸಿದರು.

ಅಲ್ಲದೇ ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಎಂ.ಜಿ. ನಾಗರಾಜ್, ಕೃಷಿಕ ಸೋಮೆಯಂಡ ಗಣೇಶ್ ತಿಮ್ಮಯ್ಯ, ಶೌರ್ಯ ಪ್ರಶಸ್ತಿ ಪಡೆದ ದೀಕ್ಷಿತ್, ನಮೃತಾ ಅವರನ್ನು ಗೌರವಿಸಲಾಯಿತು.

ಹೈಕೋರ್ಟ್ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಮಾತನಾಡಿ, ‘ನಾಡು, ಸಂಸ್ಕೃತಿ ಉಳಿಯಬೇಕಾದರೆ ಭಾಷೆ ಉಳಿಯಬೇಕು. ಭಾಷಾ ಬೆಳವಣಿಗೆಗೆ ಸಾಹಿತಿಗಳು ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರವೂ ಭಾಷೆಯ ಉಳಿವಿಗೆ ಸಂವಿಧಾನದ ಚೌಕಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ವಿಫಲವಾದರೆ ಸಾಹಿತ್ಯ ಸಮ್ಮೇಳನಗಳ ಮೂಲಕ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಸಲಹೆ ನೀಡಿದರು.

ಸಮ್ಮೇಳನಕ್ಕೆ ತೆರೆ: ಎರಡು ದಿನ ನಡೆದ ಸಮ್ಮೇಳನಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಸಮ್ಮೇಳನ ಅಧ್ಯಕ್ಷೆ ಎಂ.ಪಿ.ರೇಖಾ ಆಶಯ ನುಡಿ ಆಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಸಾಹಿತಿ ಎಂ.ಜಿ.ನಾಗರಾಜ್ ಜಿಲ್ಲಾ ಅನುದಾನಿತ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಕೋಳೆರ ಝರು ಗಣಪತಿ, ಕುಲ್ಲಚಂಡ ಗಣಪತಿ, ಕೋಳೆರ ದಯಾ ಚಂಗಪ್ಪ, ಟಿ.ಪಿ.ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.