ADVERTISEMENT

ಕೊಡಗು: ಇಬ್ಬರಲ್ಲಿ ಯಾರಿಗೆ ಸಚಿವರಾಗುವ ಭಾಗ್ಯ?

ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಪ್ರಬಲ ಆಕಾಂಕ್ಷಿಗಳು

ಅದಿತ್ಯ ಕೆ.ಎ.
Published 29 ಜುಲೈ 2021, 13:18 IST
Last Updated 29 ಜುಲೈ 2021, 13:18 IST
ಕೆ.ಜಿ.ಬೋಪಯ್ಯ
ಕೆ.ಜಿ.ಬೋಪಯ್ಯ   

ಮಡಿಕೇರಿ: ರಾಜ್ಯದಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಆರಂಭವಾಗಿದ್ದು, ಜಿಲ್ಲೆಯಲ್ಲೂ ನಿರೀಕ್ಷೆ ಗರಿಗೆದರಿದೆ.

ಜಿಲ್ಲೆಯ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಜನಾಭಿಪ್ರಾಯ ವ್ಯಕ್ತವಾಗುತ್ತಿದ್ದು, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಇಬ್ಬರಲ್ಲಿ ಯಾರಿಗೆ ಸಚಿವ ಸ್ಥಾನದ ಸುಯೋಗ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ಸಿಗುತ್ತಿಲ್ಲ. ಜಿಲ್ಲೆಯವರೇ ಸಚಿವರಾದರೆ, ಅನುಕೂಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಿಲ್ಲೆಯ ಒಬ್ಬರು ಶಾಸಕರಿಗೆ ಅವಕಾಶ ನೀಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ADVERTISEMENT

ಆನೆ, ಮಾನವ ಸಂಘರ್ಷ ನಿಂತಿಲ್ಲ. ನೆರೆ ಸಂತ್ರಸ್ತರ ಕಣ್ಣೀರು ತಪ್ಪಿಲ್ಲ. ಅತಿವೃಷ್ಟಿಯಿಂದ ಬೆಳೆಗಾರರ ಸಂಕಷ್ಟ ಹೇಳತೀರದ್ದು. ಈ ಸಮಸ್ಯೆಗಳಿಗೆ ಸ್ವಲ್ಪವಾದರೂ ಮುಕ್ತಿ ಸಿಗಬೇಕಾದರೆ, ಜಿಲ್ಲೆಯವರು ಸಚಿವರಾಗಬೇಕು ಎಂಬುದು ಜಿಲ್ಲೆಯ ಜನರ ಆಶಯ.

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯ ಯಾರಿಗೂ ಸ್ಥಾನ ಸಿಕ್ಕಿರಲಿಲ್ಲ. ಬಿಎಸ್‌ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆ.ಜಿ.ಬೋಪಯ್ಯ ಹೆಸರು ಮುಂಚೂಣಿಗೆ ಬಂದಿದ್ದರೂ ನಿರಾಸೆ ಅನುಭವಿಸಿದ್ದರು. ಕೊನೆಗೆ, ಸರ್ಕಾರಿ ಭೂಮಿ ಒತ್ತುವರಿ ಪರಿಶೀಲನಾ ಸಮಿತಿ ಅಧ್ಯಕ್ಷ ಗಾದಿ ಲಭಿಸಿತ್ತು. ಸಚಿವ ಸಂಪುಟ ವಿಸ್ತರಣೆ ವೇಳೆ ರಂಜನ್‌ ‘ನಾನೂ ಆಕಾಂಕ್ಷಿ’ ಎಂದು ಹೇಳಿಕೊಂಡಿದ್ದರೂ, ಅವರ ಸಂಪುಟ ಸೇರ್ಪಡೆ ಸಾಧ್ಯವಾಗಿರಲಿಲ್ಲ.

ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಂ.ಪಿ.ಅಪ್ಪಚ್ಚು ರಂಜನ್‌, ಯುವಜನ ಸೇವೆ ಹಾಗೂ ಕ್ರೀಡಾ ಸಚಿವರಾಗಿದ್ದರು. ಈಗಲೂ ಅವರಿಗೆ ಕೊಡವ ಸಮುದಾಯ ಕೋಟಾದಡಿ ಸಚಿವ ಸ್ಥಾನದ ಭಾಗ್ಯ ಲಭಿಸುವ ಸಾಧ್ಯತೆಯಿದೆ ಎಂಬ ಲೆಕ್ಕಾಚಾರಗಳಿವೆ. ಅರೆಭಾಷೆ ಸಮುದಾಯದ ಬೋಪಯ್ಯ ಅವರೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಕೆಲವು ವರ್ಷಗಳಿಂದ ಹೊರಗಿನವರಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ಸಿಗುತ್ತಿದೆ. ಜಿಲ್ಲೆಯವರೇ ಉಸ್ತುವಾರಿಯಾದರೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಗೊತ್ತಿರುತ್ತದೆ. ಜಿಲ್ಲೆಗೂ ಸಹಕಾರಿಯಾಗಲಿದೆ. ಜಿಲ್ಲೆ ಬಿಜೆಪಿಯ ಭದ್ರಕೋಟೆ. ಆ ಶ್ರೇಯ ಉಳಿಯಬೇಕಿದ್ದರೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.