ADVERTISEMENT

‘ಲಾಕ್‌‌ಡೌನ್‌ ಹೊಸ ಮಾರ್ಗಸೂಚಿ ಸರಿಯಿಲ್ಲ’

ಜಿಲ್ಲಾಡಳಿತ ನನ್ನ ಸಲಹೆ ಪರಿಗಣಿಸಿಲ್ಲ: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 4:54 IST
Last Updated 5 ಜುಲೈ 2021, 4:54 IST
ಕುಶಾಲನಗರ ಸಮೀಪದ ಕೂಡಿಗೆ ಸ್ತ್ರೀ ಶಕ್ತಿ ವೃದ್ಧಾಶ್ರಮದ ಆವರಣದಲ್ಲಿ ಶಾಸಕ ಅಪ್ಪಚ್ಚುರಂಜನ್ ತಮ್ಮ ಜನ್ಮದಿನದ ಅಂಗವಾಗಿ ಗಿಡ ನೆಟ್ಟು ನೀರು ಹಾಕಿದರು
ಕುಶಾಲನಗರ ಸಮೀಪದ ಕೂಡಿಗೆ ಸ್ತ್ರೀ ಶಕ್ತಿ ವೃದ್ಧಾಶ್ರಮದ ಆವರಣದಲ್ಲಿ ಶಾಸಕ ಅಪ್ಪಚ್ಚುರಂಜನ್ ತಮ್ಮ ಜನ್ಮದಿನದ ಅಂಗವಾಗಿ ಗಿಡ ನೆಟ್ಟು ನೀರು ಹಾಕಿದರು   

ಕುಶಾಲನಗರ: ಕೊಡಗು ಜಿಲ್ಲೆಗೆ ಜಾರಿ ಮಾಡಿರುವ ಲಾಕ್‌‌ಡೌನ್‌ ಹೊಸ ಮಾರ್ಗಸೂಚಿ ಸರಿಯಿಲ್ಲ’ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ‘ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಸೇರಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಆದರೆ, ಈ ಮಾರ್ಗಸೂಚಿಗೆ ನನ್ನ ಸಹಮತವಿಲ್ಲ’ ಎಂದು ಹೇಳಿದರು.

‘ಕೊಡಗಿನಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ವಾರದಲ್ಲಿ ಮೂರು ದಿನ ವ್ಯಾಪಾರ ವಾಹಿವಾಟಿಗೆ ಮಧ್ಯಾಹ್ನ 1 ಗಂಟೆವರೆಗೆ ಅವಕಾಶ ನೀಡಲಾಗಿತ್ತು. ಈ ಅವಧಿಯನ್ನು ಸಂಜೆ 4 ಗಂಟೆವರೆಗೆ ವಿಸ್ತರಣೆ ಮಾಡಿ ಉಳಿದ ನಾಲ್ಕು ದಿನ ಲಾಕ್ ಡೌನ್ ಮುಂದುವರೆಸಬೇಕು ಎಂಬ ಸಲಹೆ ನೀಡಿದ್ದೆ. ಆದರೆ, ಸಚಿವರು ಹಾಗೂ ಜಿಲ್ಲಾಧಿಕಾರಿಗಳು ವಾರದಲ್ಲಿ ಐದು ದಿನ ಅವಕಾಶ ನೀಡಿ ಎರಡು ದಿನ ಮಾತ್ರ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಇದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಆತಂಕ
ವ್ಯಕ್ತಪಡಿಸಿದರು.

ADVERTISEMENT

‘ನಾನು ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿದ್ದೇನೆ. ಅಲ್ಲಿನ ವಾಸ್ತವ ಸ್ಥಿತಿಗತಿ ಚೆನ್ನಾಗಿ ಅರಿತಿದ್ದೇನೆ. ಈ ಹಿನ್ನೆಲೆಯಲ್ಲಿ ದಿನ ಬಿಟ್ಟು ದಿನ ಮಾತ್ರ ವ್ಯಾಪಾರ ವಾಹಿವಾಟಿಗೆ ಅವಕಾಶ ನೀಡುವುದರಿಂದ ಕೊರೊನಾ ಸೋಂಕಿನ ಸರಪಳಿ ಕತ್ತರಿಸಲು ಅನುಕೂಲವಾಗುತ್ತದೆ. ಸದ್ಯದಲ್ಲಿಯೇ ಉಸ್ತುವಾರಿ ಸಚಿವರು ಸಭೆ ಕರೆಯಲಿದ್ದು, ಈ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ’ ಎಂದು ಹೇಳಿದರು.

‘ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಎಲ್ಲಾ ಕಾರ್ಮಿಕರನ್ನು ಚೆಕ್‌ಪೋಸ್ಟ್‌ಗಳಲ್ಲಿ ತಡೆದು ಅವರಿಗೆ ಕೋವಿಡ್‌ ಪರೀಕ್ಷೆ ಮಾಡಿಸಿ ಪಟ್ಟಿ ಮಾಡಿಕೊಂಡು ಕಳುಹಿಸಿಕೊಡಬೇಕು. ಈ ಪರೀಕ್ಷಾ ವರದಿಯನ್ನು ತಹಶೀಲ್ದಾರ್ ನೀಡಬೇಕು. ಪಾಸಿಟಿವ್ ಕಂಡುಬಂದ ಕಾರ್ಮಿಕರಿಗೆ ತೋಟದ ಮಾಲೀಕರೇ ಅವರನ್ನು ಕರೆದುಕೊಂಡು ಬಂದು ಕೋವಿಡ್ ಕೇಂದ್ರಕ್ಕೆ ಸೇರಿಸಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಜನ್ಮದಿನ ಆಚರಣೆ: ಕೂಡಿಗೆ ಸ್ತ್ರೀಶಕ್ತಿ ವೃದ್ಧಾಶ್ರಮದಲ್ಲಿ ಭಾನುವಾರ ಶಾಸಕ‌ ಎಂ.ಪಿ. ಅಪ್ಪಚ್ಚುರಂಜನ್ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿ ಕೊಂಡರು. ವೃದ್ಧರಿಗೆ ಕಿಟ್ ವಿತರಿಸಿ, ಅನ್ನದಾನ ಮಾಡಿದರು. ಗಿಡ ನೆಟ್ಟು ಸಂಭ್ರಮಿಸಿದರು.

ಪ.ಪಂ ಅಧ್ಯಕ್ಷ ಬಿ. ಜೈವರ್ಧನ್, ನಗರಾಧ್ಯಕ್ಷ ಉಮಾಶಂಕರ್, ಜಿ.ಪಂ‌ ಮಾಜಿ ಸದಸ್ಯೆ ಮಂಜುಳಾ, ತಾ.ಪಂ‌. ಮಾಜಿ ಸದಸ್ಯ ಗಣೇಶ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಗಣಿಪ್ರಸಾದ್, ಪ್ರಮುಖರಾದ ಕೆ.ವರದ, ಎಂ.ಬಿ.ಜಯಂತ್, ಕೂಡುಮಂಗಳೂರು ಬಿಜೆಪಿ ಘಟಕದ ಅಧ್ಯಕ್ಷ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.