ADVERTISEMENT

‘ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪ್ರಸ್ತಾವ’

ಬಾಳೆಲೆ ಹೋಬಳಿ: ನಾಡಕಚೇರಿ ಕಟ್ಟಡ ಉದ್ಘಾಟಿಸಿದ ಶಾಸಕ ಕೆ.ಜಿ.ಬೋಪಯ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 4:47 IST
Last Updated 20 ಜುಲೈ 2021, 4:47 IST
ಗೋಣಿಕೊಪ್ಪಲು ಬಳಿಯ ಬಾಳೆಲೆಯಲ್ಲಿ ನೂತನ ನಾಡಕಚೇರಿ ಕಟ್ಟಡವನ್ನು ಶಾಸಕ ಕೆ.ಜಿ.ಬೋಪಯ್ಯ ಸೋಮವಾರ ಉದ್ಟಾಟಿಸಿದರು
ಗೋಣಿಕೊಪ್ಪಲು ಬಳಿಯ ಬಾಳೆಲೆಯಲ್ಲಿ ನೂತನ ನಾಡಕಚೇರಿ ಕಟ್ಟಡವನ್ನು ಶಾಸಕ ಕೆ.ಜಿ.ಬೋಪಯ್ಯ ಸೋಮವಾರ ಉದ್ಟಾಟಿಸಿದರು   

ಗೋಣಿಕೊಪ್ಪಲು: ‘ಪೊನ್ನಂಪೇಟೆ ತಾಲ್ಲೂಕು ಕಚೇರಿ ಆಡಳಿತ ನಿರ್ವಹಣೆಗಾಗಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಲಿದೆ’ ಎಂದು ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದರು.

ಬಾಳೆಲೆಯಲ್ಲಿ₹18 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಂದಾಯ ಇಲಾಖೆಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪೊನ್ನಂಪೇಟೆ ತಾಲ್ಲೂಕು ಘೋಷಣೆಯಾದ ಬಳಿಕ ಹೋಬಳಿಯಲ್ಲಿ ನೂತನ ನಾಡ ಕಚೇರಿ ಕಟ್ಟಡವನ್ನು ಉದ್ಘಾಟಿಸಲಾಗುತ್ತಿದೆ. ಶ್ರೀಮಂಗಲ ಮತ್ತು ಹುದಿಕೇರಿ ಹೋಬಳಿಯಲ್ಲಿಯೂ ನಾಡಕಚೇರಿ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ತಾಲ್ಲೂಕು ಘೋಷಣೆಯಾದ ತಕ್ಷಣವೇ ಎಲ್ಲ ವ್ಯವಸ್ಥೆ ಸರಿದೂಗಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಕಾರ್ಯನಿರ್ವಹಿಸಲು ಇಲಾಖೆಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

ತಹಶೀಲ್ದಾರ್ ಯೋಗಾನಂದ ಮಾತನಾಡಿ, ‘ಕಂದಾಯ ಇಲಾಖೆ ನೌಕರರು ಜನರ ಸಮಸ್ಯೆಗಳಿಗೆ ತಕ್ಕಂತೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕು. ಇಲಾಖೆಯಲ್ಲಿ ಯಾವುದೇ ಆರೋಪಗಳು ಬರದಂತೆ ನೋಡಿಕೊಳ್ಳಬೇಕು. ಇಲಾಖೆ ಬಗ್ಗೆ ಜನರ ವಿಶ್ವಾಸ ಹೆಚ್ಚಿಸಬೇಕು’ ಎಂದು ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ‘ನಾಡ ಕಚೇರಿ ಸುತ್ತಮುತ್ತಲಿನ ಜನತೆಗೆ ಅನುಕೂಲಕರವಾಗಿ ಕೆಲಸ ನಿರ್ವಹಿಸುವಂತಾಗಲಿ. ಹಲವು ವಿರೋಧಗಳ ನಡುವೆಯೂ ನಾಡಕಚೇರಿ ನೂತನ ಕಟ್ಟಡ ನಿರ್ಮಾಣಗೊಂಡಿರುವುದು ಸಂತಸ ತಂದಿದೆ’ ಎಂದು ನುಡಿದರು.

ಮುಖಂಡ ಬಾನಂಡ ಪೃಥ್ಯು ಮಾತನಾಡಿದರು. ಬಿಜೆಪಿ ಮುಖಂಡ ಮುಕೊಂಡ ಶಶಿ ಸುಬ್ರಮಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊಡಮಾಡ ಸುಖೇಶ್, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೀಯಕ್ ಪೂವಂಡ ಪ್ರಭಾ, ಮುಖಂಡರಾದ ಸುನಿತಾ, ಆರ್‌ಎಂಸಿ ನಿರ್ದೇಶಕರಾದ ಮಾಚಂಗಡ ಸುಜಾಪೂಣಚ್ಚ, ಆದೇಂಗಡ ವಿನುಚಂಗಪ್ಪ, ಉಪ ತಹಶೀಲ್ದಾರ್ ಅಕ್ಕಮ್ಮ, ಶಿರಸ್ತೇದಾರ್‌ ರಾಧಕೃಷ್ಣ, ಕಂದಾಯ ಪರಿವೀಕ್ಷಕರಾದ ಸಮಿವುಲ್ಲಾ ಶರೀಫ್, ಗ್ರಾಮ ಲೆಕ್ಕಿಗ ಚಂದ್ರಪ್ರಸಾದ್, ಸಹಾಯಕ ಸೋಮಯ್ಯ, ಗಣೇಶ್, ಅನಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.