ADVERTISEMENT

ಮಡಿಕೇರಿ: ಬೆಲೆ ಏರಿಕೆ ವಿರುದ್ಧ ಜೆಡಿಎಸ್‌ ಆಕ್ರೋಶ

ಅಡುಗೆ ಅನಿಲ ಸಿಲಿಂಡರ್‌ ಹೊತ್ತು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 4:21 IST
Last Updated 11 ಮಾರ್ಚ್ 2023, 4:21 IST
ಕೊಡಗು ಜಿಲ್ಲಾ ಜೆಡಿಎಸ್‌ ಘಟಕದ ಕಾರ್ಯಕರ್ತರು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಶುಕ್ರವಾರ ಮಡಿಕೇರಿಯಲ್ಲಿ ಸಿಲಿಂಡರ್‌ ಹೊತ್ತು ಮೆರವಣಿಗೆ ನಡೆಸಿದರು
ಕೊಡಗು ಜಿಲ್ಲಾ ಜೆಡಿಎಸ್‌ ಘಟಕದ ಕಾರ್ಯಕರ್ತರು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ವಿರೋಧಿಸಿ ಶುಕ್ರವಾರ ಮಡಿಕೇರಿಯಲ್ಲಿ ಸಿಲಿಂಡರ್‌ ಹೊತ್ತು ಮೆರವಣಿಗೆ ನಡೆಸಿದರು   

ಮಡಿಕೇರಿ: ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್‌ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಅಡುಗೆ ಅನಿಲ ಸಿಲಿಂಡರ್‌ನ ಹೊತ್ತು ಯಾತ್ರೆ ನಡೆಸಿದ ಅವರು ಆಕ್ರೋಶ ವ್ಯಕ್ತಪಡಿಸಿದರು. ಎ.ವಿ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಮೆರವಣಿಗೆಯಲ್ಲಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್, ‘₹ 450 ಇದ್ದ ಅಡುಗೆ ಅನಿಲ ಸಿಲಿಂಡರ್ ದರ ಈಗ ₹ 1,140ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದವರು ಮಾತ್ರವಲ್ಲ ಈಗ ಹಳ್ಳಿಗಾಡಿನ ಜನರೂ ಅಡುಗೆಗಾಗಿ ಅನಿಲದ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಹೊರೆಯಾಗಿದೆ’ ಎಂದು ಕಿಡಿಕಾರಿದರು.

ADVERTISEMENT

ಅಡುಗೆ ಅನಿಲದ ಬೆಲೆಯನ್ನು ಕಡಿಮೆಗೊಳಿಸುವುದು ಇರಲಿ, ಕನಿಷ್ಠ ಬೆಲೆಯನ್ನು ಒಂದು ಹಂತದಲ್ಲಿ ಸ್ಥಿರವಾಗಿಸಲೂ ಸರ್ಕಾರ ಪ್ರಯತ್ನಿಸಿಲ್ಲ. ನಿರಂತರವಾಗಿ ಬೆಲೆಯನ್ನು ಏರಿಸುತ್ತಲೇ ಇದೆ. ಇದು ಬಡವರು, ಕಾರ್ಮಿಕರ ಪಾಲಿಗೆ ನುಂಗಲಾರದ ತುತ್ತಾಗಿದೆ ಎಂದರು.

‘ಜನರು ಈ ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಇಳಿಯದಿದ್ದರೆ ಮುಂದೆ ಇನ್ನಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಜನಸಾಮಾನ್ಯರು ಈಗಲೇ ಎಚ್ಚೆತ್ತುಕೊಂಡು ಬೆಲೆ ಏರಿಕೆ ವಿರುದ್ಧ ಹೋರಾಡಬೇಕು. ಇಲ್ಲದಿದ್ದರೆ, ಆಟೊ ಚಾಲಕರು, ಕಾರು ಚಾಲಕರು, ಕಾರ್ಮಿಕರು, ಕೂಲಿ ಕಾರ್ಮಿಕರು, ಬಡವರು, ರೈತರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ’ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಮನ್ಸೂರ್‌ ಅಲಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಜೆ.ಮೋಹನ್‌ ಮೌರ್ಯ, ಕಾರ್ಯದರ್ಶಿ ಎಸ್.ಸಿ.ಸುನಿಲ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.