ADVERTISEMENT

ವನ್ಯಜೀವಿ ಹಾವಳಿ ತಡೆಗೆ ವೈಜ್ಞಾನಿಕ ಚಿಂತನೆ ಅಗತ್ಯ: ಮನು ಸೋಮಯ್ಯ

ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಅವಕಾಶ ಬೇಡ: ಮನು ಸೋಮಯ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 4:01 IST
Last Updated 6 ಮಾರ್ಚ್ 2023, 4:01 IST
‘ಕೊಡಗು ದರ್ಶನ’ ವಿಚಾರ ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿದರು
‘ಕೊಡಗು ದರ್ಶನ’ ವಿಚಾರ ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿದರು   

ಗೋಣಿಕೊಪ್ಪಲು: ‘ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ಸರ್ಕಾರ ವೈಜ್ಞಾನಿಕ ಚಿಂತನೆಗಳನ್ನು ರೂಪಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.

‘ಕೊಡಗು ದರ್ಶನ’ ವಿಚಾರಗೋಷ್ಠಿಯಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಕುರಿತು ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ರೈತ, ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಬೆಳಿಗ್ಗೆ ಮನೆ ಬಿಟ್ಟು ಹೊರಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲದಂತಾಗಿದೆ. ವಿದೇಶಗಳಲ್ಲಿಯೂ ಬಹಳಷ್ಟು ವನ್ಯ ಜೀವಿಗಳಿವೆ. ಆದರೆ, ಅಲ್ಲಿ ವನ್ಯಜೀವಿಗಳಿಂದ ಯಾವುದೇ ಜೀವ ಹಾನಿಯಾಗುತ್ತಿಲ್ಲ. ಅಲ್ಲಿ ವೈಜ್ಞಾನಿಕವಾಗಿ ಮಾನವ ಮತ್ತು ವನ್ಯಜೀವಿ ಯೋಜನೆ ರೂಪಿಸಿದ್ದಾರೆ. ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ಇಂಥ ಯೋಜನೆ ರೂಪಿಸುವ ಇಚ್ಛಾಶಕ್ತಿ ಇಲ್ಲ’ ಎಂದು ಬೇಸರ ವ್ಯಕ್ತ ಪಡಿಸಿದರು.

‘ವನ್ಯಜೀವಿಗಳ ಹಾವಳಿ ತಡೆಗಟ್ಟಲು ಕೋಟಿಗಟ್ಟಲೆ ಅನುದಾನ ಬಂದರೂ ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ ಯಾರೇ ಎಷ್ಟೇ ದೊಡ್ಡವರಾದರೂ ಅದನ್ನು ಬಿಡಿಸಬೇಕು. ವನ್ಯಜೀವಿಗಳ ಸಂತಾನೋತ್ಪತ್ತಿ ನಿಯಂತ್ರಿಸಬೇಕು. ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ADVERTISEMENT

ಬುಡಕಟ್ಟು ಸಂಸ್ಕೃತಿ ಕುರಿತು ನಾಗರಹೊಳೆಯ ಶಿವು ಮಾತನಾಡಿ, ‘ಈ ನೆಲದ ಸಂಸ್ಕೃತಿಯಾದ ಬುಡಕಟ್ಟು ಸಂಸ್ಕೃತಿ ಉಳಿಯಬೇಕಾದರೆ ಗಿರಿಜನರನ್ನು ಅವರ ಮೂಲ ನೆಲೆಯಿಂದ ಬೇರ್ಪಡಿಸಬಾರದು. ನಮ್ಮ ದೈವಗಳು ಪ್ರಕೃತಿಯ ರೂಪದಲ್ಲಿಯೇ ಇವೆ. ಅರಣ್ಯದೊಟ್ಟಿಗೆ ಬದುಕುವ ಸಂಸ್ಕೃತಿ ಗಿರಿಜನರದ್ದು. ಕನ್ನಡ ಭಾಷೆ ಉಳಿಯಬೇಕಾದರೆ ಅದರೊಟ್ಟಿಗೆ ಇರುವ ಬುಡಕಟ್ಟು ಭಾಷೆ ಸಂಸ್ಕೃತಿ ಉಳಿವಿಗೆ ಕನ್ನಡಿಗರೂ ಕೈಜೋಡಿಸಬೇಕು’ ಎಂದು ಪ್ರತಿಪಾದಿಸಿದರು.

ಪತ್ರಕರ್ತ ಎಚ್.ಟಿ.ಅನಿಲ್ ಮಾತನಾಡಿ, ‘ಕೊಡಗಿನಲ್ಲಿ ಪ್ರವಾಸೋದ್ಯಮ ವಿಫುಲವಾಗಿ ಬೆಳೆದಿದೆ. ಆದರೆ ಅದನ್ನು ನಿಭಾಯಿಸುವಷ್ಟು ಮೂಲ ಸೌಕರ್ಯಗಳು ಇನ್ನೂ ರೂಪಿತವಾಗಿಲ್ಲ. ವರ್ಷದಲ್ಲಿ 20 ಲಕ್ಷ ಪ್ರವಾಸಿಗರು ಕೊಡಗಿಗೆ ಬರುತ್ತಿದ್ದಾರೆ. ಇದರಿಂದ ಎಲ್ಲ ಕಡೆ ದಟ್ಟಣೆ ಉಂಟಾಗುತ್ತಿದೆ. ರಸ್ತೆ ವ್ಯವಸ್ಥೆ ಸರಿಪಡಿಸಿ ಮೂಲ ಸೌಕರ್ಯ ಒದಗಿಸುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ’ ಎಂದು ಹೇಳಿದರು.

ಚಲನಚಿತ್ರ ಉದ್ಯಮದಲ್ಲಿ ಕೊಡಗು ಕುರಿತು ಮುಲ್ಲೆಂಗಡ ಮಧೋಷ್ ಪೂವಯ್ಯ ಪ್ರಬಂಧ ಮಂಡಿಸಿದರು. ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.