ADVERTISEMENT

ಗೋಣಿಕೊಪ್ಪಲು: ಹಳ್ಳಿಗಟ್ಟುವಿನ ಪಾಷಾಣಮೂರ್ತಿ, ನರಿಪೋದ ತೆರೆ

ದಕ್ಷಿಣ ಕೊಡಗಿನಲ್ಲೊಂದು ವಿಶಿಷ್ಟ ಆಚರಣೆ; ತೆರೆ ಕಟ್ಟಲು ತೆಂಗಿನ ಸುಳಿ, ಅಲಂಕಾರಕ್ಕೆ ಬಾಳೆ ಬಳಕೆ

ಜೆ.ಸೋಮಣ್ಣ
Published 6 ಮಾರ್ಚ್ 2023, 3:59 IST
Last Updated 6 ಮಾರ್ಚ್ 2023, 3:59 IST
ನರಿಪೋದ ತೆರೆಯಲ್ಲಿ ಹುಲಿ ಆವೇಶಕ್ಕೆ ಒಳಗಾದ ವ್ಯಕ್ತಿಯನ್ನು ಹಗ್ಗದಿಂದ ಹಿಡಿದಿರುವುದು
ನರಿಪೋದ ತೆರೆಯಲ್ಲಿ ಹುಲಿ ಆವೇಶಕ್ಕೆ ಒಳಗಾದ ವ್ಯಕ್ತಿಯನ್ನು ಹಗ್ಗದಿಂದ ಹಿಡಿದಿರುವುದು   

ಗೋಣಿಕೊಪ್ಪಲು: ಕೊಡಗು ವೈವಿಧ್ಯಮಯ ಸಂಸ್ಕೃತಿಯ ನಾಡು. ತೆರೆ ಸಂಸ್ಕೃತಿ ಎನ್ನುವುದು ಕೊಡಗಿನಲ್ಲಿ ಅದರಲ್ಲೂ ಕೊಡವ ಜನಾಂಗದಲ್ಲಿ ಹಿಂದಿನಿಂದಲೂ ಬೆಳೆದುಕೊಂಡು ಬಂದಿರುವ ಬಹು ವಿಶಿಷ್ಟ ದೈವಿಕ ಸಂಸ್ಕೃತಿ. ಇವುಗಳಲ್ಲಿ ಅಜ್ಜಪ್ಪ ತೆರೆ, ಚಾಮುಂಡಿ, ಗುಳಿಗ ತೆರೆ, ನರಿಪೂದ ತೆರೆ, ಪಾಷಣಮೂರ್ತಿ ಕೋಲ ಮೊದಲಾದ ತೆರೆಗಳನ್ನು ಕಾಣಬಹುದು. ಈ ಎಲ್ಲ ತೆರೆಗಳು ನೆರೆ ರಾಜ್ಯಗಳಾದ ಕೇರಳ ಹಾಗೂ ತುಳುನಾಡಿನಲ್ಲಿಯೂ ಕಂಡು ಬರುತ್ತವೆ.

ಕೊಡಗಿನಲ್ಲಿ ಇಂದಿಗೂ ಹಲವು ಕುಟುಂಬಗಳು ಪ್ರತಿವರ್ಷ ಪಾಷಾಣಮೂರ್ತಿ ಕೋಲವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುತ್ತಾರೆ. ಇದನ್ನು ದಕ್ಷಿಣ ಕನ್ನಡ ಮೂಲದ ಪಾಲೆ ಜನಾಂಗದವರು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಿಕೊಡುತ್ತಾರೆ. ಇದರ ಜತೆಗೆ, ದಕ್ಷಿಣ ಕೊಡಗಿನಲ್ಲಿ ಹೆಚ್ಚಾಗಿ ಕಂಡು ಬರುವ ಬೇಡು ಹಬ್ಬಗಳಲ್ಲಿ ಕೂಡಾ ನಾವು ವಿವಿಧ ತೆರೆಗಳನ್ನು ಕಾಣಬಹುದು. ಇದನ್ನು ಜಿಲ್ಲೆಯ ಮೂಲೆ ನಿವಾಸಿಗಳಲ್ಲೊಬ್ಬರಾದ ಪಣಿಕ ಜನಾಂಗದವರು ಈ ತೆರೆಗಳನ್ನು ಕಟ್ಟುತ್ತಾರೆ. ಹಲವಾರು ಕುಟುಂಬಗಳಲ್ಲಿ ನರಿಪೂದ ತೆರೆ ಎನ್ನುವ ವಿಶಿಷ್ಟ ಆಚರಣೆ ಕೂಡ ನಮಗೆ ವಿಭಿನ್ನವಾಗಿ ಕಾಣುತ್ತದೆ.

ಕೊಡವ ಭಾಷೆಯಲ್ಲಿ ನರಿ ಎಂದರೆ ಹುಲಿ ಎಂದರ್ಥ. ನರಿಪೂದ ತೆರೆಯಲ್ಲಿ ವ್ಯಕ್ತಿಯ ಮೇಲೆ ಆವೇಶ ಬಂದು ಆತನ ವರ್ತನೆ ಕೂಡ ಹುಲಿಯಂತೆಯೇ ಇರುತ್ತದೆ. ಆವೇಶ ಬಂದ ಮನುಷ್ಯನನ್ನು ಭ್ತಕ್ತರು ಹಗ್ಗಕಟ್ಟಿ ಹಿಡಿದಿರುತ್ತಾರೆ. ಇಲ್ಲದಿದ್ದರೆ ಇತರ ಮನುಷ್ಯರ ಮೇಲೆ ಬಿದ್ದು ಹಾನಿ ಮಾಡುತ್ತದೆ ಎಂಬ ಭಯವಿದೆ. ಇನ್ನು ಹಲವಾರು ಕಡೆಗಳಲ್ಲಿ ಅಜ್ಜಪ್ಪ ತೆರೆ, ವಿಷ್ಣುಮೂರ್ತಿ ತೆರೆ ಹೀಗೆ ಹಲವಾರು ವೈಶಿಷ್ಟ್ಯಪೂರ್ಣ ತೆರೆಗಳನ್ನು ಕಾಣಬಹುದು,

ADVERTISEMENT

ಹಳ್ಳಿಗಟ್ಟು ಮೂಲದ ಚಮ್ಮಟೀರ ಕುಟುಂಬದಲ್ಲಿಯೂ ಕೂಡ ಪಾಷಾಣಮೂರ್ತಿ ಕೋಲ ಹಾಗೂ ಬಲ್ಯಯಿಂಗಕ್ ಕಟ್ಟಿಚಿಡುವೋ ಎಂಬ ಎರಡು ವಿಶೇಷ ಆಚರಣೆಯನ್ನು ಮೂರು ಅಥವಾ ಐದು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರಲಾಗುತ್ತಿದೆ. ಪಾಷಾಣಮೂರ್ತಿ ಕೋಲದಲ್ಲಿ ಊರಿನವರೆಲ್ಲರನ್ನು ಸೇರಿಸಿ ವಿಜೃಂಭಣೆಯಿಂದ ನಡೆಸುತ್ತಾರೆ. ಪಾಲೆ ಜನಾಂಗದಿಂದ ನಡೆಸಲಾಗುವ ಈ ತೆರೆ ತುಳುನಾಡಿನ ಕೋಲ ವೈಭವವನ್ನೇ ಹೋಲುತ್ತದೆ. ತೆರೆ ಕಟ್ಟಲು ಹೆಚ್ಚಾಗಿ ತೆಂಗಿನ ಮರದ ಸುಳಿಯನ್ನು ಬಳಸುತ್ತಾರೆ. ಇನ್ನೂ ಐದು ಅಥವಾ ಏಳು ವರ್ಷಗಳಿಗೊಮ್ಮೆ ನಡೆಯುವ ಬಲ್ಯಯಿಂಗಕ್ ಕಟ್ಟಿಚಿಡುವವೋ ಎಂಬ ವಿಶಿಷ್ಟ ಆಚರಣೆ ಬಹುತೇಕ ಅಜ್ಜಪ್ಪ ತೆರೆಯನ್ನು ಹೋಲುತ್ತದೆ.

ಕೊಡಗಿನ ಮೂಲ ನಿವಾಸಿಗಳ ಲ್ಲೊಬ್ಬರಾದ ಪಣಿಕ ಜನಾಂಗದಿಂದ ಈ ತೆರೆಯನ್ನು ಅಥವಾ ಆಚರಣೆಯನ್ನು ಮಾಡಲಾಗುತ್ತದೆ. ಇಲ್ಲಿ ಬಾಳೆಯ ಗಿಡದ ಪಟ್ಟೆಗಳನ್ನು ತೆಗೆದು ಪಾಂಬಳೆ ಎನ್ನುವ ಅಲಂಕಾರಿಕ ಹೂವಿನ ಗಿಡವನ್ನು ತಯಾರಿಸ ಲಾಗುತ್ತದೆ. ಇದನ್ನು ಸುಂದರವಾಗಿ ತೇರಿನಂತೆ ಹೆಣೆಯಲಾಗುತ್ತದೆ. ಈ ತೆರೆಗಳು ಇಡೀ ರಾತ್ರಿ ನಡೆಯುತ್ತವೆ. ಭಕ್ತರು ಅತ್ಯಂತ ಭಕ್ತಿಪೂರ್ವಕವಾಗಿ ತೆರೆಕಟ್ಟಿದ ವಕ್ತಿಯ ಜತೆ ವರ್ತಿಸುತ್ತಾರೆ. ಇದು ನುಚ್ಚುಟೆ ತೆರೆ, ಕಾಳಿ ಪೊಲ್ತಿ ತೆರೆ ಹೀಗೆ ಹಲವಾರು ತೆರೆಗಳನ್ನು ಈ ಬಲ್ಯಯಿಂಗಕ್ ಕಟ್ಟಿಚಿಡುವೋ ಉತ್ಸವದಲ್ಲಿ ಕಾಣಬಹುದು.

ಈ ತೆರೆ ಕಟ್ಟಿಸುವವರೇ ಅಲ್ಲದೆ ಅಕ್ಕಪಕ್ಕದ ಮನೆಯವರೂ ಈ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಕಷ್ಟಗಳನ್ನು ನಿವೇದಿಸಿಕೊಳ್ಳುತ್ತಾರೆ. ಪೂಜೆ ಪುನಸ್ಕಾರ ಹರಕೆಗಳನ್ನು ತೀರಿಸುತ್ತಾರೆ.

ಈ ತೆರೆಗಳಲ್ಲಿ ಮನುಷ್ಯರಿಗೆ ಬರುವ ಕಾಯಿಲೆಗಳನ್ನು ನಿವಾರಣೆ ಮಾಡುವುದು, ಬೆಳೆಗಳನ್ನು ರಕ್ಷಣೆ ಮಾಡುವುದು ಮೊದಲಾದ ಬೇಡಿಕೆಗಳನ್ನು ದೈವದ ಆವೇಶ ಬಂದವರ ಮುಂದೆ ನಿವೇದಿಸಿಕೊಳ್ಳುತ್ತಾರೆ. ಈ ತೆರೆಗಳೆಲ್ಲವೂ ಕೃಷಿ ಚಟುವಟಿಕೆ ಮುಗಿದ ಬಳಿಕ ಬಹುತೇಕವಾಗಿ ಅಕ್ಟೋಬರ್‌ನಿಂದ ಆರಂಭಗೊಂಡು ಮೇ ತಿಂಗಳದವರೆಗೂ ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.