ADVERTISEMENT

ಪರೋಪಕಾರಕ್ಕಾಗಿ ಸದಾ ತುಡಿಯುವ ನಿವೃತ್ತ ದಾದಿ ಫಿಲೋಮಿನಾ

ಜೆ.ಸೋಮಣ್ಣ
Published 8 ಮಾರ್ಚ್ 2023, 4:02 IST
Last Updated 8 ಮಾರ್ಚ್ 2023, 4:02 IST
ಗೋಣಿಕೊಪ್ಪಲು ಬಳಿಯ ತಿತಿಮತಿಯಲ್ಲಿ ಫಿಲೋಮಿನ ಅವರು ಅನಾಥರನ್ನು ಅನಾಥಾಶ್ರಮಕ್ಕೆ ಕರೆದುಕೊಂಡು ಹೋಗುತ್ತಿರುವುದು.
ಗೋಣಿಕೊಪ್ಪಲು ಬಳಿಯ ತಿತಿಮತಿಯಲ್ಲಿ ಫಿಲೋಮಿನ ಅವರು ಅನಾಥರನ್ನು ಅನಾಥಾಶ್ರಮಕ್ಕೆ ಕರೆದುಕೊಂಡು ಹೋಗುತ್ತಿರುವುದು.   

ಗೋಣಿಕೊಪ್ಪಲು: ಅನಾರೋಗ್ಯಕ್ಕೆ ತುತ್ತಾದ ಪತಿ ಮೃತಪಟ್ಟು 5 ವರ್ಷ ಕಳೆದಿದೆ. ಮಗಳು ಅಂಗವಿಕಲೆ. ಆದರೂ, ಪರೋಪಕಾರಕ್ಕೆ ಜೀವ ತುಡಿಯುತ್ತದೆ. ಇದು ತಿತಿಮತಿಯ ನಿವೃತ್ತ ನರ್ಸ್ ಫಿಲೋಮಿನಾ ಅವರ ಜೀವನ ಗಾಥೆ.

ಫಿಲೋಮಿನಾ ಅವರು ಬಡವರಿಗೆ, ಹಸಿದವರಿಗೆ, ಅನಾಥರಿಗೆ ನಿತ್ಯ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. 3 ವರ್ಷಗಳ ಕಾಲ ಜಗತ್ತನ್ನೇ ಕಾಡಿದ ಕೋವಿಡ್ 19ರ ಸಂದರ್ಭದಲ್ಲಿ ತಮ್ಮ ಮಗಳಿಗೆ ಸರ್ಕಾರ ನೀಡಿದ ಅಂಗವಿ ಕಲರ ಮಾಸಾಶನ ಹಾಗೂ ತಮಗೆ ಬಂದ ನಿವೃತ್ತಿ ವೇತನದಲ್ಲಿ ಮುಖ್ಯಮಂತ್ರಿ ಕೋವಿಡ್ ಪರಿಹಾರ ಖಾತೆಗೆ ₹ 50 ಸಾವಿರ ಕೊಡುಗೆ ನೀಡಿದ್ದಾರೆ.

ಫಿಲೋಮಿನಾ ನಿವೃತ್ತರಾಗಿ 3 ವರ್ಷ ಕಳೆದಿದೆ. 15 ವರ್ಷದ ಅಂಗವಿಕಲ ಮಗಳು ಮನೆಯಲ್ಲಿದ್ದಾಳೆ. ಅವರು ಹಾಸಿಗೆಯಿಂದ ಮೇಲೇಳಲಾಗುತ್ತಿಲ್ಲ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದಾರೆ. ತಮಗೆ ಒಂದಷ್ಟು ಬರುವ ನಿವೃತ್ತಿ ವೇತನದಲ್ಲೇ ಬದುಕು ದೂಡುತ್ತಿದ್ದಾರೆ.

ADVERTISEMENT

ಆದರೂ, ಕಷ್ಟ ಎಂದು ಬಂದವರಿಗೆ, ಅನಾಥರಿಗೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಜತೆಗೆ, ಏನಾದರೊಂದು ದಾರಿ ತೋರಿಸುತ್ತಿ ದ್ದಾರೆ. ಭಿಕ್ಷಕುರು, ಅನಾಥರು ಕಂಡು ಬಂದರೆ ಅವರನ್ನು ತಾವೇ ಬಾಡಿಗೆ ವಾಹನದಲ್ಲಿ ಕರೆದುಕೊಂಡು ಹೋಗಿ ಅನಾಥಾಶ್ರಮಕ್ಕೆ ಇಲ್ಲವೇ ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಬಡ ಮಕ್ಕಳಿಗೆ, ಪರಿತ್ಯಕ್ತ ಮಹಿಳೆಯರಿಗೆ ಒಂದಲ್ಲ ಒಂದು ಬಗೆಯಲ್ಲಿ ಸಹಾಯ ಮಾಡುವ ಮಾನವೀಯ ಸಂಬಂಧದ ಕರುಳು ಇವರದು. ರಾಯಚೂರಿನಲ್ಲಿ ಶುಶ್ರೂಷಕಿ ಕೆಲಸಕ್ಕೆ ಸೇರಿ ಅಲ್ಲಿ ಕರ್ತವ್ಯನಿಷ್ಠೆ ಮೆರೆದ ಇವರಿಗೆ ಅತ್ಯುತ್ತಮ ಸೇವಕಿ ಪ್ರಶಸ್ತಿ ಸಂದಿದೆ. ಬಳ್ಳಾರಿಯ 700ರಿಂದ 800 ಹಳ್ಳಿಗಳಿಗೆ ತೆರಳಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಆರೋಗ್ಯದ ಅರಿವು ಮೂಡಿಸಿದರು. ಇವರ ಸೇವೆಯನ್ನು ಪರಿಗಣಿಸಿದ ಅಂದಿನ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವರಾಗಿದ್ದ ರಾಣಿ ಸತೀಶ್ ಅವರು ಇವರಿಗೆ ‘ಕರ್ನಾಟಕ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಿದ್ದರು.

ಬಸ್ ಸೌಲಭ್ಯ ಮತ್ತು ಯಾವುದೇ ಮೂಲಸೌಕರ್ಯಗಳಿಲ್ಲದ ಬಳ್ಳಾರಿ ಜಿಲ್ಲೆಯ ಕುಗ್ರಾಮಗಳಿಗೆ ಕಾಲುನಡಿಗೆ ಯಲ್ಲಿಯೇ ತೆರಳಿ ಬಹಳಷ್ಟು ಮಹಿಳೆಯರಿಗೆ ಸುಸೂತ್ರ ಹೆರಿಗೆ ಮಾಡಿಸಿದ ಕೀರ್ತಿ ಇವರದು. ಇದನ್ನು ಗಮನಿಸಿದ ಅಲ್ಲಿನ ಆಂಗ್ಲೋ ಇಂಡಿಯನ್ ವೆಲ್ಫೇರ್ ಅಸೋಸಿ ಯೇಷನ್, ಆರೋಗ್ಯ ಇಲಾಖೆಯೊಡನೆ ಸೇರಿ 2008ರಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಿತು.

ನಂತರ ಗೋಣಿಕೊಪ್ಪಲಿಗೆ ಬಂದ ಅವರು ಇಲ್ಲಿಯೇ ನಿವೃತ್ತರಾದರು. ಇದೀಗ ತಮ್ಮ ಮಗಳೊಂದಿಗೆ ಸೇರಿ ತಿತಿಮತಿಯಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಬಡವರ, ಅನಾಥರ, ಅಸಹಾಯಕರ ಸೇವೆ ಮಾಡುವಲ್ಲಿ ಸದಾ ಚಿಂತಿಸು ತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.