ADVERTISEMENT

ಕೋವಿಡ್‌ ಆತಂಕ: ಜಗತ್ತು ತಲ್ಲಣ

ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:23 IST
Last Updated 21 ಸೆಪ್ಟೆಂಬರ್ 2021, 16:23 IST
ಕೋಲಾರದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಶಾಂತಿ ದಿನಾಚರಣೆಯಲ್ಲಿ ಗಣ್ಯರು ಶಾಂತಿಯ ಸಂದೇಶವುಳ್ಳ ಪೋಸ್ಟರ್‌ ಬಿಡುಗಡೆ ಮಾಡಿದರು
ಕೋಲಾರದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಶಾಂತಿ ದಿನಾಚರಣೆಯಲ್ಲಿ ಗಣ್ಯರು ಶಾಂತಿಯ ಸಂದೇಶವುಳ್ಳ ಪೋಸ್ಟರ್‌ ಬಿಡುಗಡೆ ಮಾಡಿದರು   

ಕೋಲಾರ: ‘ಜಾಗತಿಕವಾಗಿ ವಿಶ್ವವು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿಯನ್ನು ಯುವಕರು ಮೈಗೂಡಿಸಿಕೊಳ್ಳಬೇಕು’ ಎಂದು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕಿವಿಮಾತು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ರೋಟರಿ ಕೋಲಾರ ನಂದಿನಿ ಸಂಸ್ಥೆ ಸಹಯೋಗದಲ್ಲಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಶಾಂತಿ ದಿನಾಚರಣೆಯಲ್ಲಿ ಮಾತನಾಡಿ, ‘ಯುವಕರು ಸಮಾಜಕ್ಕೆ ಕೈಲಾದಷ್ಟು ಸೇವೆ ಸಲ್ಲಿಸಬೇಕು. ಸವಾಲುಗಳಿಗೆ ಧನಾತ್ಮಕವಾಗಿ ಚಿಂತಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್‌ ಆತಂಕದಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಕೊರೊನಾ ಸೋಂಕಿನಿಂದ ಜಾಗತಿಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಆರೋಗ್ಯ ಮತ್ತು ಶಾಂತಿಗಾಗಿ ಸಾಕಷ್ಟು ಹಣ ಖರ್ಚು ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸ್ವಪ್ರೇರಣೆಯಿಂದ ಸರ್ಕಾರದ ಸೂಚನೆ ಹಾಗೂ ಕಾನೂನು ಪಾಲನೆಯ ಶಿಸ್ತು ಮೈಗೂಡಿಸಿಗೊಂಡರೆ ವಿಶ್ವದಲ್ಲಿ ಶಾಂತಿ ನೆಲೆಗೊಳ್ಳುತ್ತದೆ’ ಎಂದು ಜಿಲ್ಲಾ ಗೈಡ್ಸ್ ಆಯುಕ್ತೆ ಕೆ.ಆರ್.ಜಯಶ್ರೀ ಅಭಿಪ್ರಾಯಪಟ್ಟರು.

ADVERTISEMENT

‘ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಶಾಂತಿ, ಕೌಶಲ ಮೈಗೂಡಿಸಲು ಶಿಬಿರ ನಡೆಸಲಾಗುತ್ತಿದೆ. ಗ್ರಾಮ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಶಿಬಿರ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಶಿಬಿರಗಳಲ್ಲಿ ಭಾಗವಹಿಸಬೇಕು. ಜಾಗತಿಕ ಮಟ್ಟದಲ್ಲಿ ಶಾಂತಿ ರೂಪಿಸೋಣ ಎಂಬ ಸಂದೇಶದಡಿ ವರ್ಷವಿಡೀ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ವಿಶ್ವ ಶಾಂತಿ: ‘ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ 246ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದೆ. ವಿಶ್ವ ಶಾಂತಿ ಎಂದರೆ ಕೇವಲ ಯುದ್ಧ ತಡೆಯುವುದು ಮಾತ್ರವಲ್ಲ. ಆಹಾರ ಪೋಲು ಮಾಡದಿರುವುದು, ಗಿಡ ಮರ ಬೆಳೆಸುವುದು, ನೀರನ್ನು ಮಿತವಾಗಿ ಬಳಸುವುದು, ಪ್ರಾಣಿ ಪಕ್ಷಿ ಸಂಕುಲಕ್ಕೆ ನೆರವಾಗುವುದು, ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸೇವೆ ಸಲ್ಲಿಸುವ ಮೂಲಕ ವಿಶ್ವ ಶಾಂತಿ ರೂಪಿಸಬಹುದು’ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ಹೇಳಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಪದಾಧಿಕಾರಿಗಳಾದ ಸುರೇಶ್, ಉಮಾದೇವಿ, ಜವೇರಿಲಾಲ್, ಗೋಪಾಲರೆಡ್ಡಿ, ಪಾರ್ವತಿ, ಅಮೀನಾ ಬೇಗಂ, ವೆಂಕಟೇಶಪ್ಪ, ವಿಶ್ವನಾಥ್‌, ಅಕ್ಷಯ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.