ADVERTISEMENT

ಎಪಿಎಂಸಿ ವಿಸ್ತರಣೆಗೆ ಭೂಮಿ ನೀಡಿಕೆ

ಸದ್ಯದಲ್ಲೇ ಸಭೆ: ಸಹಕಾರ ಸಚಿವ ಸೋಮಶೇಖರ್ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:36 IST
Last Updated 21 ಸೆಪ್ಟೆಂಬರ್ 2021, 16:36 IST

ಕೋಲಾರ: ಜಿಲ್ಲಾ ಕೇಂದ್ರದ ಎಪಿಎಂಸಿ ವಿಸ್ತರಣೆಗೆ ಅಗತ್ಯವಿರುವ ಭೂಮಿ ಒದಗಿಸುವ ಸಂಬಂಧ ಕಂದಾಯ ಹಾಗೂ ಅರಣ್ಯ ಇಲಾಖೆ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿಧಾನಮಂಡಲ ಅಧಿವೇಶನದಲ್ಲಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರು ಕೋಲಾರ ಎಪಿಎಂಸಿ ವಿಸ್ತರಣೆಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಜಾಗ ಒದಗಿಸುವುದಾಗಿ ಹೇಳಿದರು.

‘ಏಷ್ಯಾದಲ್ಲೇ ಅತಿ ದೊಡ್ಡ ಮಾರುಕಟ್ಟೆಯಾದ ಕೋಲಾರ ಎಪಿಎಂಸಿಯಲ್ಲಿ ಜಾಗದ ಸಮಸ್ಯೆಯಿಂದ ರೈತರು, ವರ್ತಕರು, ಹಮಾಲರಿಗೆ ಸಮಸ್ಯೆಯಾಗುತ್ತಿದೆ. ಕಿರಿದಾದ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವುದು ದೊಡ್ಡ ಸವಾಲಾಗಿದೆ’ ಎಂದು ಗೋವಿಂದರಾಜು ಹೇಳಿದರು.

ADVERTISEMENT

‘ಮಾರುಕಟ್ಟೆ ಆವರಣದಲ್ಲಿ ಜಾಗ ಕಡಿಮೆ ಇರುವುದರಿಂದ ಟೊಮೆಟೊ ಸಾಗಣೆ ವಾಹನಗಳು ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್‌ ರಸ್ತೆಯಲ್ಲಿ ನಿಲ್ಲುತ್ತಿವೆ. ಇದರಿಂದ ಜನರ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಸರ್ವಿಸ್‌ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿ ಆಗಾಗ್ಗೆ ಅಪಘಾತ ಸಂಭವಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಪಿಎಂಸಿ ವಿಸ್ತರಣೆ ವಿಚಾರದಲ್ಲಿ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಂಡು ಜಮೀನು ಒದಗಿಸಬೇಕು. ಎಪಿಎಂಸಿಯನ್ನು ವಿಶ್ವದರ್ಜೆ ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ‘ಸದ್ಯ ಮಾರುಕಟ್ಟೆ ವಿಸ್ತಾರ 18 ಎಕರೆ 31 ಗುಂಟೆ ಇದೆ. ಸುಗ್ಗಿ ಸಮಯದಲ್ಲಿ ಮಾರುಕಟ್ಟೆಗೆ ಪ್ರತಿನಿತ್ಯ ಸುಮಾರು 40 ಸಾವಿರ ಕ್ವಿಂಟಾಲ್ ಟೊಮೊಟೊ ಬರುತ್ತದೆ. ರೈತರು, ಹಮಾಲರು, ವ್ಯಾಪಾರಿಗಳು ಸೇರಿದಂತೆ ಸುಮಾರು 3 ಸಾವಿರ ಜನ ಈ ಎಪಿಎಂಸಿಗೆ ಬರುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ವಹಿವಾಟಿಗೆ ಸಮಸ್ಯೆಯಾಗುತ್ತಿದೆ’ ಎಂದು ಒಪ್ಪಿಕೊಂಡರು.

ಜಮೀನು ಗುರುತು: ‘ಮಾರುಕಟ್ಟೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ ವ್ಯಾಪ್ತಿಯ ಕಪರಸಿದ್ದನಹಳ್ಳಿಯಲ್ಲಿ 17.10 ಎಕರೆ, ಮಡೇರಹಳ್ಳಿಯಲ್ಲಿ 12.30 ಎಕರೆ ಜಮೀನು ಗುರುತಿಸಲಾಗಿದೆ. ಈ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು, ಕೃಷಿ ಮಾರುಕಟ್ಟೆ ಸಮಿತಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಭೂಮಿಯ ಬದಲು ನಾಯಕರಹಳ್ಳಿ ಗ್ರಾಮದಲ್ಲಿ 18 ಎಕರೆ 3 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ ನೀಡುವಂತೆ ಕಂದಾಯ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ಎಪಿಎಂಸಿಗೆ ಭೂಮಿ ಹಸ್ತಾಂತರವಾದ ಬಳಿಕ 30 ಎಕರೆಯಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲಾಗುತ್ತದೆ. ಸರ್ಕಾರ ದೇಶದಲ್ಲೇ ಮಾದರಿಯಾದ ಮಾರುಕಟ್ಟೆ ನಿರ್ಮಿಸುವ ಉದ್ದೇಶ ಹೊಂದಿದೆ. ಭೂಮಿ ಹಸ್ತಾಂತರಕ್ಕೆ ಇರುವ ಸಮಸ್ಯೆಗಳ ನಿವಾರಣೆಗೆ ಸದ್ಯದಲ್ಲೇ ಸಭೆ ನಡೆಸುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.