ADVERTISEMENT

ಪರಿಹಾರ ಬಿಡುಗಡೆ: ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 12:43 IST
Last Updated 21 ಸೆಪ್ಟೆಂಬರ್ 2021, 12:43 IST
ಲಾಕ್‌ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಜಿಲ್ಲೆಗೆ ಬಿಡುಗಡೆ ಆಗಬೇಕಿದ್ದ ಅನುದಾನವನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಕೋರಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಸದಸ್ಯರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಬೆಂಗಳೂರಿನಲ್ಲಿ ಮಂಗಳವಾರ ಮನವಿ ಸಲ್ಲಿಸಿದರು
ಲಾಕ್‌ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಜಿಲ್ಲೆಗೆ ಬಿಡುಗಡೆ ಆಗಬೇಕಿದ್ದ ಅನುದಾನವನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಕೋರಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಸದಸ್ಯರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಬೆಂಗಳೂರಿನಲ್ಲಿ ಮಂಗಳವಾರ ಮನವಿ ಸಲ್ಲಿಸಿದರು   

ಕೋಲಾರ: ಲಾಕ್‌ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಜಿಲ್ಲೆಗೆ ಬಿಡುಗಡೆ ಆಗಬೇಕಿದ್ದ ₹ 18 ಕೋಟಿ ತಡೆ ಹಿಡಿಯಲಾಗಿದ್ದು, ಆ ಹಣವನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಕೋರಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಸದಸ್ಯರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಬೆಂಗಳೂರಿನಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.

ಪರಿಷತ್‌ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್‌ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾದ ಸದಸ್ಯರು, ‘ಅಸಂಘಟಿತ ಕಾರ್ಮಿಕರು ಕೋವಿಡ್ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಜೀವನಾಧಾರ ಕಳೆದುಕೊಂಡು ಪರಿತಪಿಸಿದರು. ಕೋವಿಡ್ ಪರಿಹಾರ ನಿಧಿ ಬಿಡುಗಡೆಯಲ್ಲಿ ಅನಗತ್ಯ ವಿಳಂಬ ತಪ್ಪಿಸಿ ಕಾರ್ಮಿಕರಿಗೆ ಅನುಕೂಲ ಮಾಡಿ ಕೊಡಬೇಕು’ ಎಂದು ಮನವಿ ಮಾಡಿದರು.

‘ಕೋವಿಡ್ 2ನೇ ಅಲೆ ಕಾರಣಕ್ಕೆ ಲಾಕ್‌ಡೌನ್ ಆಗಿದ್ದರಿಂದ ಕಟ್ಟಡ ಕಾರ್ಮಿಕರು, ಆಟೊ ಮತ್ತು ಟ್ಯಾಕ್ಸಿ ಚಾಲಕರು, ಕ್ಷೌರಿಕರು, ದೋಬಿಗಳು, ಟೈಲರ್‌ಗಳು, ಹಮಾಲರು, ಭಟ್ಟಿ ಕಾರ್ಮಿಕರು, ಕುಂಬಾರರು, ಕಮ್ಮಾರರು, ಮನೆ ಕೆಲಸದವರು, ಚಿಂದಿ ಹಾಯುವ ಕಾರ್ಮಿಕರು ತಮ್ಮ ಜೀವನಾಧಾರವಾದ ಕೆಲಸ ಕಳೆದುಕೊಂಡಿದ್ದರು. ಹೀಗಾಗಿ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಯಿಂದ ಕಟ್ಟಡ ಕಾರ್ಮಿಕರು ಮತ್ತು ಆಟೊ ಚಾಲಕರಿಗೆ ತಲಾ ₹ 3 ಸಾವಿರ, ಇತರೆ ಕಾರ್ಮಿಕರಿಗೆ ₹ 2 ಸಾವಿರ ಪರಿಹಾರ ಘೋಷಿಸಿತ್ತು’ ಎಂದು ಸುರೇಶ್‌ಕುಮಾರ್‌ ವಿವರಿಸಿದರು.

ADVERTISEMENT

‘ಕೋಲಾರ ಜಿಲ್ಲೆಯ 1,03,054 ಕಟ್ಟಡ ಕಾರ್ಮಿಕರಲ್ಲಿ 42,617 ಕಾರ್ಮಿಕರಿಗೆ ₹ 12.74 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿಕೆ ಕಾರ್ಮಿಕರಿಗೆ ಅನುದಾನ ಬಿಡುಗಡೆ ಮಾಡಬೇಕಿದೆ. ಜಿಲ್ಲೆಯ 33,092 ಮಂದಿ ಅಸಂಘಟಿತ ಕಾರ್ಮಿಕರಲ್ಲಿ 4,685 ಕಾರ್ಮಿಕರಿಗೆ ಮಾತ್ರ ₹ 93 ಲಕ್ಷ ಬಿಡುಗಡೆ ಮಾಡಿದ್ದು, ಉಳಿದ ಕಾರ್ಮಿಕರಿಗೆ ಹಣ ಬಿಡುಗಡೆಯಾಗಿಲ್ಲ’ ಎಂದು ವಿವರಿಸಿದರು.

ವಿನಾಯಿತಿ ನೀಡಬೇಕು: ‘ಕೋವಿಡ್ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ನವೀಕರಣ ಸಾಧ್ಯವಾಗಿಲ್ಲದ ಕಾರಣ ನವೀಕರಣಕ್ಕೆ ವಿನಾಯಿತಿ ನೀಡಬೇಕು’ ಎಂದು ಕೋರಿದರು. ಮನವಿಗೆ ಸ್ಪಂದಿಸಿದ ಸಚಿವರು, ‘ವಾರದೊಳಗೆ ಅನುದಾನ ಬಿಡುಗಡೆ ಮಾಡಿಸುತ್ತೇವೆ’ ಎಂದು ಭರವಸೆ ನೀಡಿದರು.

ರಾಜ್ಯ ಅಸಂಘಟಿತ ಕಾರ್ಮಿಕ ಪರಿಷತ್ ಉಪಾಧ್ಯಕ್ಷ ನಾಗರಾಜರಾವ್, ಅಡುಗೆ ಕಾರ್ಮಿಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಬಿ.ಎಸ್.ರಮೇಶ್‌ಬಾಬು, ಸದಸ್ಯರಾದ ಶ್ರೀನಿವಾಸಗೌಡ, ಶ್ಯಾಮಸುಂದರ್, ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.