ADVERTISEMENT

ಕೋಲಾರ: ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಹೆಚ್ಚುವರಿ ವಾರ್ಡ್‌ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 13:15 IST
Last Updated 22 ಸೆಪ್ಟೆಂಬರ್ 2021, 13:15 IST

ಕೋಲಾರ: ‘ಜಿಲ್ಲಾ ಕೇಂದ್ರದ ಎಸ್‌ಎನ್ಆರ್‌ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಕೊಠಡಿ ಕೊರತೆ ನಿವಾರಣೆಗೆ ಹೆಚ್ಚುವರಿ ಕೊಠಡಿ ನಿರ್ಮಿಸಲು ಮಂಜೂರಾತಿ ನೀಡುತ್ತೇವೆ’ ಎಂದು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆರೋಗ್ಯ ಸಚಿವರ ಪರವಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರು ವಿಧಾನ ಮಂಡಲ ಅಧಿವೇಶನದಲ್ಲಿ ಬುಧವಾರ ಎಸ್‌ಎನ್ಆರ್‌ ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಕೊಠಡಿ ಕೊರತೆ ನೀಗಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು, ‘ಆಸ್ಪತ್ರೆಯಲ್ಲಿ ಶೀಘ್ರವೇ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ’ ಎಂದರು.

‘ಆಸ್ಪತ್ರೆ ಮಕ್ಕಳ ವಾರ್ಡ್‌ಗಳ ಕೊರತೆಯಿದೆ. ಹೀಗಾಗಿ ಹೆರಿಗೆಯಾದ ಒಂದೇ ದಿನದಲ್ಲಿ ಬಾಣಂತಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತಿದೆ. ಕೊಲಾರ ಜಿಲ್ಲೆಯ ಮಕ್ಕಳಲ್ಲಿ ಇತ್ತೀಚೆಗೆ ವೈರಾಣು ಜ್ವರ ಕಾಣಿಸಿಕೊಂಡಿದೆ. ಆಗಸ್ಟ್‌ ತಿಂಗಳಲ್ಲಿ 284 ಮಕ್ಕಳು ಮತ್ತು ಸೆಪ್ಟೆಂಬರ್‌ನಲ್ಲಿ 231ಕ್ಕೂ ಹೆಚ್ಚು ಮಕ್ಕಳು ವೈರಾಣು ಜ್ವರದ ಕಾರಣಕ್ಕೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ’ ಎಂದು ಗೋವಿಂದರಾಜು ಸದನಕ್ಕೆ ತಿಳಿಸಿದರು.

ADVERTISEMENT

‘ಆಸ್ಪತ್ರೆಗೆ ದಾಖಲಾಗಿರುವ ಬಹುತೇಕ ಮಕ್ಕಳು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಮಕ್ಕಳು ಚಿಕಿತ್ಸೆಗೆ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯನ್ನೇ ಅವಲಂಬಿಸಬೇಕಿದೆ. ಆದರೆ, ಆಸ್ಪತ್ರೆಯಲ್ಲಿ ಬೆಡ್ ಮತ್ತು ಕೊಠಡಿ ಕೊರತೆಯಿರುವ ಕಾರಣ ಮಕ್ಕಳಿಗೆ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸುಮಾರು 16 ಎಕರೆ ವಿಸ್ತಾರವಾಗಿರುವ ಎಸ್‌ಎನ್‌ಆರ್‌ ಆಸ್ಪತ್ರೆಯನ್ನು 1937ರಲ್ಲಿ ಕಾರ್ಯಾರಂಭ ಮಾಡಿತು. ಆಗ ಜಿಲ್ಲೆಯ ಜನಸಂಖ್ಯೆ ತುಂಬಾ ಕಡಿಮೆಯಿತ್ತು. ಈಗಿನ ಜನಸಂಖ್ಯೆಗೆ ಹೋಲಿಸಿದರೆ ವಾರ್ಡ್‌ಗಳ ಸಂಖ್ಯೆ ಬಹಳ ಕಡಿಮೆಯಿದೆ. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಹೆಣ್ಣು ಮಕ್ಕಳು ಹೆರಿಗೆ ನಂತರ ಒಂದೇ ದಿನದಲ್ಲಿ ಮನೆಗೆ ಹೋಗುವ ಪರಿಸ್ಥಿತಿಯಿದೆ. ಹೀಗಾಗಿ ಆಸ್ಪತ್ರೆಯಲ್ಲಿ ನೂತನ ಕಟ್ಟಡ ನಿರ್ಮಿಸಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.