ADVERTISEMENT

ನಗರಸಭೆ ಮೇಲೆ ಎಸಿಬಿ ದಾಳಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:32 IST
Last Updated 22 ಸೆಪ್ಟೆಂಬರ್ 2021, 3:32 IST
ಕೊಪ್ಪಳದ ನಗರಸಭೆ ಕಚೇರಿಗೆ ಮಂಗಳವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದರು
ಕೊಪ್ಪಳದ ನಗರಸಭೆ ಕಚೇರಿಗೆ ಮಂಗಳವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದರು   

ಕೊಪ್ಪಳ:ನಗರಸಭೆಯ ವಿವಿಧ ವಿಭಾಗದಲ್ಲಿ ಅಕ್ರಮ, ವಿಳಂಬ, ಸಾರ್ವಜನಿಕರನ್ನು ವಿನಾ ಕಾರಣಅಲೆದಾಡಿಸುವುದು ಸೇರಿದಂತೆ ನಗರದ ಸಾರ್ವಜನಿಕರಿಂದ ಬಂದ ಹಲವು ದೂರು ಆಧರಿಸಿ ನಗರಸಭೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು.

ಮಂಗಳವಾರ ಮಧ್ಯಾಹ್ನ1ಕ್ಕೆ ದಿಢೀರ್‌ನೆ ನಗರಸಭೆಗೆ ದಾಳಿ ನಡೆಸಿ ವಿವಿಧ ವಿಭಾಗಗಳ ಕಡತ ಪರಿಶೀಲನೆ ಮಾಡಿದ ಎಸಿಬಿ ಅಧಿಕಾರಿಗಳು, ನಗರಸಭೆ ವಿರುದ್ಧ ಹಲವು ಅಕ್ರಮ ಆರೋಪ ಮತ್ತು ದೂರು ಕೇಳಿಬಂದಿದ ಹಿನ್ನೆಲೆಯಲ್ಲಿ ದಾಳಿ ನಡೆಸಿ ದಾಖಲೆಗಳ ಅಂಕಿ-ಅಂಶ ತಾಳೆ ಹಾಕಿದರು.

ನಿವೇಶನದ ಕುರಿತು ಫಾರಂ-3 ಅಕ್ರಮ ನೀಡುವುದು, ನಿಯಮ ಉಲ್ಲಂಘಿಸಿ ಕೆಲ ಪರವಾನಗಿ ನೀಡಿರು ವುದು, ಟ್ರೇಡ್ ಲೈಸೆನ್ಸ್ ನೀಡದಿರುವಿಕೆ ಸೇರಿದಂತೆ ಹಲವು ಅಕ್ರಮ ನಗರಸಭೆಯಲ್ಲಿ ನಡೆಯುತ್ತಿವೆ. ಸಿಬ್ಬಂದಿ ಹಣ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೇ ವಿನಾ ಕಾರಣ ಸಾರ್ವಜನಿಕರನ್ನುಗೋಳಾಡಿಸುತ್ತಾರೆ. ಅರ್ಜಿ ವಿಲೇವಾರಿ ಮಾಡದೆ ಕಾಲಹರಣ ಮಾಡಲಾಗುತ್ತಿದೆ ಎಂದು ಹಲವರು ಎಸಿಬಿಗೆ ದೂರು ಸಲ್ಲಿಸಿದ್ದರು.

ADVERTISEMENT

ಎಸಿಬಿ ಡಿಎಸ್‌ಪಿ ಶಿವರಾಜ ನೇತೃತ್ವದಲ್ಲಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಸಿಬ್ಬಂದಿಯನ್ನು ಕಚೇರಿಯಲ್ಲಿ ಕೂಡಿಸಿಕೊಂಡು ದಾಖಲೆ ಪರಿಶೀಲನೆ ನಡೆಸಿದರು. ಒಂದೊಂದು ವಿಭಾಗದ ದಾಖಲೆಗಳನ್ನು, ದೂರಿನಲ್ಲಿರುವ ಅಂಶಗಳನ್ನು ತಾಳೆ ಹಾಕಿ ನೋಡಿದರು. ರಾತ್ರಿವರೆಗೂ ಪರಿಶೀಲನೆ ಮುಂದುವರೆದಿದ್ದು, ಸಾರ್ವಜನಿಕರಿಗೆ ನಗರಸಭೆ ಕಚೇರಿ ಒಳಗೆ ಪ್ರವೇಶ ನೀಡಿರಲಿಲ್ಲ. ಪರಿಶೀಲನೆಯು ಪೂರ್ಣಗೊಂಡ ಬಳಿಕ ವಿವರ ನೀಡುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.