ADVERTISEMENT

ಕುಕನೂರು ಪಟ್ಟಣದಲ್ಲಿ ತ್ಯಾಜ್ಯ ಸಮಸ್ಯೆ: ರೋಗ ಭೀತಿ

ಗಾವರಾಳ ಗ್ರಾಮದಲ್ಲಿ ಕಸ ಸುರಿಯುವ ಕುಕನೂರು ಪಟ್ಟಣ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:22 IST
Last Updated 22 ಮೇ 2022, 2:22 IST
ಕುಕನೂರು ತಾಲ್ಲೂಕಿನ ಗಾವರಾಳ ಗ್ರಾಮದ ರಸ್ತೆ ಬದಿ ಕಸ ಹಾಕಿರುವುದು
ಕುಕನೂರು ತಾಲ್ಲೂಕಿನ ಗಾವರಾಳ ಗ್ರಾಮದ ರಸ್ತೆ ಬದಿ ಕಸ ಹಾಕಿರುವುದು   

ಕುಕನೂರು: ಪಟ್ಟಣದ ಕಸವನ್ನು ತಾಲ್ಲೂಕಿನ ಗಾವರಾಳ ಗ್ರಾಮದ ರಸ್ತೆಯ ಬದಿ ಸುರಿಯಲಾಗುತ್ತಿದೆ. ತ್ಯಾಜ್ಯ ಸಂಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದರಿಂದ ಗ್ರಾಮಸ್ಥರಲ್ಲಿ ರೋಗದ ಭೀತಿ ಎದುರಾಗಿದೆ.

65 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದ 19 ವಾರ್ಡ್ ಗಳಿಂದ ದಿನಕ್ಕೆ 40 ಟನ್ ಕಸ ಸಂಗ್ರಹವಾಗುತ್ತದೆ. ಸದ್ಯ 20 ಕಿ.ಮೀ ಹೊಂದಿರುವ ಪಟ್ಟಣಕ್ಕೆ ಮತ್ತಷ್ಟು ಪ್ರದೇಶಗಳು ಸೇರ್ಪಡೆಯಾಗುತ್ತಿದ್ದು, ಇದರಿಂದ ಪಟ್ಟಣದಲ್ಲಿ ಉತ್ಪಾದನೆಯಾಗುವ ಕಸದ ಪ್ರಮಾಣವೂ ಹೆಚ್ಚಲಿದೆ.

3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಸದ ರಾಶಿಯು ರೈತರ ಜಮೀನುಗಳ ಮೂಲಕ ಬೆಣಕಲ್ ಕೆರೆಗೆ ಸೇರುತ್ತಿದೆ. ಇದರಿಂದ ಕೆರೆಯು ಕಲುಷಿತಗೊಳ್ಳುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗಾವರಾಳ ಗ್ರಾಮದ ಸರ್ವೆ ನಂ. 98ರ ಸರ್ಕಾರಿ ಜಮೀನಿನಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಇದರ ಸುತ್ತಮತ್ತ ಕೃಷಿ ಜಮೀನು ಹೊಂದಿರುವ ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆ ಯಾಗುತ್ತಿದೆ. ಅಲ್ಲದೇ ಈ ರಸ್ತೆಯಲ್ಲಿ ತೆರಳುವವರಿಗೆ ದುರ್ವಾಸನೆ ಬೀರುತ್ತಿದೆ. ಆದ್ದರಿಂದ ಇಲ್ಲಿ ಕಸ ವಿಲೇವಾರಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪೈಪ್‌ಲೈನ್ ಮೇಲೆ ತ್ಯಾಜ್ಯ ಸಂಗ್ರಹ: ತ್ಯಾಜ್ಯ ಸಂಗ್ರಹ ಸ್ಥಳದ ಹತ್ತಿರ ಪಟ್ಟಣ ಹಾಗೂ ಗಾವರಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 9 ಬೋರ್‌ವೆಲ್ ಗಳ ಪೈಪ್ ಲೈನ್ ಗಳ ಮೇಲೆ ತ್ಯಾಜ್ಯ ಸುರಿಯಲಾಗಿದೆ. ಅಲ್ಲಲ್ಲಿ ಪೈಪ್ ಲೈನ್ ಒಡೆದು ತ್ಯಾಜ್ಯವು ಕುಡಿಯುವ ನೀರು ಸೇರುತ್ತಿದೆ. ಇದರಿಂದ ನೀರು ಕಲುಷಿತಗೊಂಡು ಜನರು ರೋಗಭೀತಿಯಿಂದ ಹೆದರುವಂ ತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ತ್ಯಾಜ್ಯದಿಂದ ಉಂಟಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಪಟ್ಟಣ ಪಂಚಾಯಿತಿ ಮುಂದಾಗಿಲ್ಲ. ಸಂಗ್ರಹ ವಾದ ತ್ಯಾಜ್ಯವನ್ನು ಬೇರೆಡೆ ವಿಲೇವಾರಿ ಮಾಡಲು ಕ್ರಮ ಕೈಗೊಂಡಿಲ್ಲ. ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಗ್ರಾಮಸ್ಥ ಮಲ್ಲಪ್ಪ ಕಳ್ಳಿಮನಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.