ADVERTISEMENT

ಏರುತ್ತಿದೆ ಬಿಸಿಲು, ಬಸವಳಿಯುತ್ತಿದೆ ಜೀವ....

ತಂಪು ಮಾರುವವರಿಗೆ ಬಂಡವಾಳವಾದ ಬಿಸಿಗಾಳಿ, ಪಾನೀಯ ಕುಡಿಯಲು ಮುಗಿಬೀಳುತ್ತಿರುವ ಜನ, ಹಣ್ಣುಗಳಿಗೆ ಇದು ಸುಗ್ಗಿಕಾ

ಪ್ರಮೋದ
Published 20 ಮಾರ್ಚ್ 2023, 5:26 IST
Last Updated 20 ಮಾರ್ಚ್ 2023, 5:26 IST
ಕೊಪ್ಪಳದ ಮಾರುಕಟ್ಟೆಗೆ ಲಗ್ಗೆ ಇಟ್ಟ ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ ಹಣ್ಣುಗಳು –ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ
ಕೊಪ್ಪಳದ ಮಾರುಕಟ್ಟೆಗೆ ಲಗ್ಗೆ ಇಟ್ಟ ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ ಹಣ್ಣುಗಳು –ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ   

ಕೊಪ್ಪಳ: ಉಫ್‌ ... ಅಬ್ಬಾ!

ಕೆಲ ಹೊತ್ತು ಹೊರಗಡೆ ಬಿರು ಬಿಸಿಲಿನಲ್ಲಿ ಓಡಾಡಿ ಮನೆಗೆ ಬಂದು ಫ್ಯಾನ್‌ ಹಾಕುತ್ತಿದ್ದಂತೆ ಬರುವ ಗಾಳಿ ದೇಹಕ್ಕೆ ಬಡೆಯುತ್ತಿದ್ದಂತೆ ಪ್ರತಿಯೊಬ್ಬರಿಂದ ಬರುತ್ತಿರುವ ಉದ್ಗಾರವಿದು.

ಕೆಲ ದಿನಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದ್ದು, ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿ ಪ್ರಚಾರ ನಡೆಸುತ್ತಿದ್ದಾರೆ. ಈ ಚುನಾವಣಾ ಕಾವಿಗೂ ಮೊದಲೇ ಈಗ ಆರಂಭವಾಗಿರುವ ಬಿಸಿಲಿನ ‘ಕಾವು’ ಜನರನ್ನು ನಿತ್ಯ ಹೈರಾಣ ಮಾಡುತ್ತಿದೆ. ದಿನದಿಂದ ದಿನಕ್ಕೆ ಬಿಸಿಲು ಏರುತ್ತಿದ್ದಂತೆ, ಜೀವ ಬಸವಳಿಯುತ್ತಿದೆ.

ADVERTISEMENT

ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಮಾರ್ಚ್‌ ಬಂತೆಂದರೆ ಪರೀಕ್ಷೆಯ ಕಾಲ. ಮಕ್ಕಳು ಜವಾಬ್ದಾರಿಯಿಂದ ಓದುವಂತೆ ಮಾಡಬೇಕಾದ ಕಾರಣ ಪೋಷಕರಿಗೂ ಇದು ಪರೀಕ್ಷೆಯ ಕಾಲವೇ. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಾರ್ಚ್‌ ಬಿಸಿಲು ಭಾರಿ ಹೈರಾಣ ಮಾಡುತ್ತದೆ. ಜಿಲ್ಲೆಯ ಜನರಿಗೆ ಮಕ್ಕಳ ಪರೀಕ್ಷೆಯನ್ನೂ ನಿರ್ವಹಿಸುವ ಜೊತೆಗೆ ಬಿಸಿಲಿನ ಸವಾಲು ಎದುರಿಸುವ ’ಪರೀಕ್ಷೆ’ಯೂ ಇದೆ. ಚುನಾವಣಾ ವರ್ಷವೂ ಆದ ಕಾರಣ ಸರ್ಕಾರಿ ನೌಕರರು ಕೂಡ ಬಿರುಬಿಸಿಲಿಗೆ ಏದುಸಿರು ಬಿಡುತ್ತಿದ್ದಾರೆ.

ಜನವರಿ ಹಾಗೂ ಫೆಬ್ರುವರಿಯಲ್ಲಿ ಸಾಮಾನ್ಯವಾಗಿ 24ರಿಂದ 26 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತಿದ್ದ ಬಿಸಿಲಿನ ತಾಪಮಾನ ಈಗ 36ರಿಂದ 38ಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಈ ಕಾವು ಏರುತ್ತಲೇ ಇರುವ ಕಾರಣ ಜನ ಮನೆ ಬಿಟ್ಟು ಹೊರಗಡೆ ಬರಲು ಹಿಂದೇಟು ಹಾಕುವಂತಾಗಿದೆ. ನೆತ್ತಿ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಕೂಲಿ ಕಾರ್ಮಿಕರು ಕೆಲ ಹೊತ್ತು ಕೆಲಸ ಮಾಡಿ ಸುಸ್ತಾಗಿ ಮರಗಳ ನೆರಳಿನ ಆಸರೆ ಪಡೆಯುತ್ತಿರುವುದು ಕಂಡುಬರುತ್ತಿದೆ. ಬಿಸಿಲಲ್ಲಿ ದಾಹ ತಣಿಸಿಕೊಳ್ಳಲು ತಂಪು ಪಾನೀಯ, ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.

ಬಿಸಿಲು ಜನರನ್ನು ಹೈರಾಣ ಮಾಡಿದರೆ ಹಣ್ಣುಗಳ ವ್ಯಾಪಾರಿಗಳಿಗೆ ಇದುವೇ ಬಂಡವಾಳವಾಗಿದೆ. ಕೊಪ್ಫಳ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣುಗಳ ಮಾರಾಟ ಜೋರಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಕಲ್ಲಂಗಡಿಗಳ ರಾಶಿಗಳನ್ನು ಹಾಕಲಾಗಿದೆ. ಇವುಗಳ ಜೊತೆಗೆ ಸೇಬು, ಮಾವಿನ ಹಣ್ಣು, ದ್ರಾಕ್ಷಿ, ಚಿಕ್ಕು, ಮೋಸಂಬಿ, ಪೈನಾಪಲ್‌, ದಾಳಿಂಬೆ, ಬಾಳೆಹಣ್ಣು, ಎಳೆನೀರು, ಕಬ್ಬಿನ ಹಾಲು, ವಿವಿಧ ಹಣ್ಣುಗಳ ಜ್ಯೂಸ್‌ಗಳು, ನಿಂಬೆಹಣ್ಣಿನ ಪಾನಕ, ಸೋಡಾ, ಮಜ್ಜಿಗೆ, ಲಸ್ಸಿ, ರಾಗಿ ಶರಬತ್‌ ಹೀಗೆ ತರಹೇವಾರಿ ತಂಪು ಪಾನೀಯ ಮತ್ತು ಹಣ್ಣುಗಳನ್ನು ಸವಿಯುತ್ತಿದ್ದಾರೆ.

ಬಿಸಿಲು ಕಡಿಮೆಯಿದ್ದಾಗ ಒಂದಕ್ಕೆ ₹25 ಇದ್ದ ಎಳೆನೀರಿನ ಬೆಲೆ ಈಗ ₹35ಕ್ಕೆ ಏರಿಕೆಯಾಗಿದೆ. ಒಂದು ಗ್ಲಾಸ್‌ಗೆ ₹10 ಇದ್ದ ಶರಬತ್‌ ಬೆಲೆ ಈಗ ₹15ಕ್ಕೆ ಹೆಚ್ಚಳವಾಗಿದೆ. ಬಹುತೇಕ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳ ಪರೀಕ್ಷೆಗಳು ಈಗಾಗಲೇ ಆರಂಭವಾಗಿದ್ದು, ’ಓದಿನ ರಜೆ’ಯನ್ನು ಮನೆಯಲ್ಲಿ ಕಳೆಯುತ್ತಿದ್ದಾರೆ. ಗೃಹಿಣಿಯರು, ವಯೋವೃದ್ಧರು ಬೆಳಿಗ್ಗೆ ವಾಕಿಂಗ್‌ ಮುಗಿಸಿ ಮನೆ ಸೇರಿಕೊಂಡರು ಮತ್ತೆ ಇಳಿಸಂಜೆಯಲ್ಲೇ ಹೊರಗಡೆ ಬರುತ್ತಿದ್ದಾರೆ.

ಮಾರುಕಟ್ಟೆಗೆ ಬಂದ ಮಡಿಕೆ: ಕೋವಿಡ್‌ ಬಳಿಕ ಆರೋಗ್ಯದ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸುತ್ತಿರುವ ಜನ ಫ್ರಿಡ್ಜ್‌ನ ನೀರು ಕುಡಿಯುವ ಬದಲು ಸಾಂಪ್ರದಾಯಿಕ ಶೈಲಿಯ ಗಡಿಗೆಗಳನ್ನು ಬಳಸುತ್ತಿದ್ದಾರೆ. ’ಬಡವರ ಫ್ರಿಡ್ಜ್‌’ ಎನಿಸಿರುವ ಗಡಿಗೆಯಲ್ಲಿ ನೀರು ಹಾಕಿಟ್ಟರೆ ತಂಪಾಗಿ ದೇಹಕ್ಕೂ ಹಿತವೆನಿಸುತ್ತದೆ. ಇನ್ನಷ್ಟು ನೀರು ಕುಡಿಯಬೇಕು ಎನಿಸುತ್ತದೆ. ಕೊಪ್ಪಳದ ಕುಂಬಾರ ಓಣಿ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ವಿನ್ಯಾಸಗಳ ಮಡಿಕೆಗಳು ಮಾರಾಟಕ್ಕೆ ಬಂದಿವೆ. ಸಾಂಪ್ರದಾಯಿಕ ಗಡಿಗೆಗಳ ಜೊತೆಗೆ ಗ್ರಾಹಕರನ್ನು ಸೆಳೆಯಲು ರಾಜಸ್ಥಾನದ ಶೈಲಿಯಲ್ಲಿ ಮಣ್ಣಿನ ಸಾಮಗ್ರಿಗಳು ಕೂಡ ಇವೆ. ಆದರೆ ವ್ಯಾಪರ ನಿರೀಕ್ಷೆಯಷ್ಟು ಇಲ್ಲ.

‘ಬಿಸಿಲು ಇನ್ನಷ್ಟು ಹೆಚ್ಚಾಗಬೇಕು. ಮೊದಲೆಲ್ಲ ಮಾರ್ಚ್‌ ವೇಳೆಗೆ ಮಾರಾಟವಾಗುತ್ತಿದ್ದ ಗಡಿಗೆಗಳು ಈ ವರ್ಷ ಆಗಿಲ್ಲ. ಯುಗಾದಿಯ ಬಳಿಕ ಬಿಸಿಲು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಆಗ ವ್ಯಾಪಾರ ಹೆಚ್ಚಾಗಬಹುದು’ ಎಂದು ಕೊಪ್ಪಳದ ಮಣ್ಣಿನ ಸಾಮಗ್ರಿಗಳ ಮಾರಾಟದ ವ್ಯಾಪಾರಿ ಕುಂಬಾರ ಓಣಿಯ ನಿಂಗಪ್ಪ ಕುಂಬಾರ ಹೇಳುತ್ತಾರೆ.

ಜಾಗತಿಕ ತಾಪಮಾನದ ಪರಿಣಾಮದಿಂದಾಗಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪವೂ ಹೆಚ್ಚಾಗುತ್ತಿದೆ. ಮರಗಳ ಸಂಖ್ಯೆ ಕಡಿಮೆಯಾದ ಕಾರಣ ಈ ತಾಪ ತಡೆಯಲು ಜನ ಪ್ರಯಾಸ ಪಡುವಂತಾಗಿದೆ. ಸರ್ಕಾರ ಹೆಚ್ಚು ಸಸಿಗಳನ್ನು ನೆಡಬೇಕು. ಹೆಚ್ಚು ಮರಗಳನ್ನು ಬೆಳೆಸಿ ಸಂರಕ್ಷಣೆ ಮಾಡಿದರೆ ಮಾತ್ರ ಬಿರುಬಿಸಿಲಿನ ನಡುವೆಯೂ ನೆಮ್ಮದಿಯಾಗಿ ಬದುಕಲು ಸಾಧ್ಯ.

ಶ್ಯಾಮಿದಸಾಬ್ ದೋಟಿಹಾಳ, ತಾವರಗೇರಾ


ಈ ವರ್ಷ ಬೇಸಿಗೆ ಆರಂಭದಲ್ಲಿಯೇ ತಾಳಲು ಆಗುತ್ತಿಲ್ಲ. ಮರಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇವೆ. ಮುಂಗಾರು ಹಂಗಾಮಿನ‌ ಖುತುಮಾನದ‌ಲ್ಲಿ ಉತ್ತಮವಾಗಿ ಮಳೆ‌ಯಾಗುವ ನಿರೀಕ್ಷೆಯಿದೆ. ಈಗಿನ ಬಿಸಿಲಿನ ತಾಪದಿಂದ ಪಾರಾಗಲು ತಂಪು ಪಾನೀಯ ಕುಡಿಯುವುದು, ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ಕೊಟ್ಟಿದ್ದೇನೆ.

ಶೋಭಾ ಕುಷ್ಟಗಿ, ತಾವರಗೇರಾ


ಬಿಸಿಲಿನ ತಾಪಕ್ಕೆ ದೇಹ ತಂಪಾಗಿಸಿಕೊಳ್ಳಲು ಎಳೆನೀರು ಉತ್ತಮ ಪಾನೀಯ. ಹಲವು ವರ್ಷಗಳಿಂದ ಎಳೆನೀರು ಮಾರಾಟ ನಡೆಸುತ್ತಿದ್ದು, ಬಿಸಿಲಿನ ಝಳಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಎಳೆನೀರು ಕುಡಿಯುತ್ತಾರೆ. ತೆಂಗಿನಕಾಯಿ ₹25 ರಿಂದ ₹35ರವರೆಗೆ ಮಾರಾಟ ಮಾಡುತ್ತಿದ್ದೇನೆ.

ಗೋಪಿ, ಎಳೆನೀರು ವ್ಯಾಪಾರಿ, ಗಂಗಾವತಿ


ಗಂಗಾವತಿಯಲ್ಲಿ ಬಿಸಿಲು ಹೆಚ್ಚಾಗಿದ್ದು, ಬೆಳಿಗ್ಗೆ 11ರಿಂದ 4 ಗಂಟೆ ತನಕ ಮನೆಬಿಟ್ಟು ಹೊರಬರಲಾಗದ ಪರಿಸ್ಥಿತಿ ಇದೆ. ಬಿಸಿಲಿಗೆ ಹೆದರಿ ಜಮೀನಿನ ಕೆಲಸಕ್ಕೆ ಜನರೇ ಬರುತ್ತಿಲ್ಲ. ಬೆಳೆಗೆ ಸರಿಯಾಗಿ ನೀರು ನಿಲ್ಲುತ್ತಿಲ್ಲ. ಗಂಗಾವತಿ ತಾಲ್ಲೂಕಿನ ಕೆಲ ಗ್ರಾ ಮೀಣ ಭಾಗದಲ್ಲಿ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ.

ಪ್ರಕಾಶಗೌಡ, ಚಿಕ್ಕಡಂಕನಕಲ್ ಗ್ರಾಮದ ನಿವಾಸಿ

‘ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳಿ’

ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಧುಮೇಹ ಹಾಗೂ ಬಿಪಿ ಇರುವವರೂ ಸೇರಿದಂತೆ ಎಲ್ಲರೂ ಈ ದಿನಮಾನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಕಾಟನ್‌ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಹೊರಗಡೆ ಹೋಗುವ ಅನಿವಾರ್ತೆಯಿದ್ದವರೆ ಮಾತ್ರ ಬಿಸಿಲಿನಲ್ಲಿ ಓಡಾಡಿ. ನೀರಿನ ಅಂಶ ಹೆಚ್ಚಿದ್ದರೆ ತಾಪ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.

ಉಮೇಶ ರಾಜೂರು, ವೈದ್ಯ, ಕೊಪ್ಪಳ

ಪೂರಕ ಮಾಹಿತಿ: ಕೆ. ಶರಣಬಸವ ನವಲಹಳ್ಳಿ, ಮಂಜುನಾಥ ಎಸ್‌. ಅಂಗಡಿ, ಎನ್‌. ವಿಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.