ADVERTISEMENT

ಸ್ವಾತಂತ್ರ್ಯ, ಭ್ರಾತೃತ್ವದ ಜತೆಗೆ ಬಹುತ್ವವೂ ಇರಲಿ: ಡಾ. ರಹಮತ್ ತರೀಕೆರೆ

ಲೇಖಕ ಡಾ. ರಹಮತ್ ತರೀಕೆರೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 4:35 IST
Last Updated 24 ಫೆಬ್ರುವರಿ 2023, 4:35 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಡಾ. ಚಂದ್ರಶೇಕರ ಕಂಬಾರ ಸಭಾಭವನದಲ್ಲಿ ಗುರುವಾರ ನಡೆದ 24ನೇ ಸಾಂಸ್ಕೃತಿ ಸಮ್ಮೇಳನದ ಸಮಾರೋಪದಲ್ಲಿ ಡಾ. ರಹಮತ್ ತರೀಕರೆ ಮಾತನಾಡಿದರು
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಡಾ. ಚಂದ್ರಶೇಕರ ಕಂಬಾರ ಸಭಾಭವನದಲ್ಲಿ ಗುರುವಾರ ನಡೆದ 24ನೇ ಸಾಂಸ್ಕೃತಿ ಸಮ್ಮೇಳನದ ಸಮಾರೋಪದಲ್ಲಿ ಡಾ. ರಹಮತ್ ತರೀಕರೆ ಮಾತನಾಡಿದರು   

ಧಾರವಾಡ: ‘ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಜತೆಗೆ ನಾವು ‘ಬಹುತ್ವ’ ಎಂಬುದನ್ನೂ ಮನಸ್ಸಿನಲ್ಲೇ ಸೇರಿಸಿಕೊಳ್ಳಬೇಕಿದೆ’ ಎಂದು ಲೇಖಕ ಡಾ. ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಗುರುವಾರ ನಡೆದ 24ನೇ ಸಂಸ್ಕೃತಿ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಅನೇಕ ಭಾಷೆ, ಜಾತಿ, ಉಡುಗೆ, ಅಡುಗೆ, ಸಂಸ್ಕೃತಿ ಇರುವ ದೇಶದಲ್ಲಿ ಒಂದನ್ನು ಹೇರಲು ಸಾಧ್ಯವಿಲ್ಲ. ಹೀಗಾಗಿ ಬಹುತ್ವವನ್ನು ಹೇಗೆ ಮಹಿಳಾ ಸಾಹಿತ್ಯ ಅಭಿವ್ಯಕ್ತಿ ಮಾಡುತ್ತದೆ ಎಂಬುದರ ಕುರಿತು ಅಧ್ಯಯನ ನಡೆಸಬೇಕಿದೆ. ಸಾಹಿತ್ಯದಲ್ಲಿ ‘ನಾವು’ ಎಂಬ ಪರಿಭಾಷೆ ಬರಬೇಕಿದೆ’ ಎಂದರು.

ADVERTISEMENT

‘ಕಾವ್ಯಗಳಲ್ಲಿ ಮಹಾ ಗಂಡಾಲಿಕೆಯ ಮನಸ್ಸಿನ ಕುವೆಂಪು, ಕಾದಂಬರಿಗಳಲ್ಲಿ ಹೆಣ್ಣಾಗುತ್ತಾರೆ. ಇದನ್ನು ಅವರ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಗಮನಿಸಬಹುದು. ಹೆಣ್ಣನ್ನು ಬಿಟ್ಟು ಕಾದರಂಬರಿ ಬರೆಯಲು ಸಾಧ್ಯವಿಲ್ಲ ಎಂಬಂತೆ, ಕಾದಂಬರಿಕಾರ ಹೆಣ್ಣಾಗದೆಯೂ ಕಾದರಂಬರಿ ಬರೆಯುವುದು ಅಸಾಧ್ಯ. ಹೀಗೆ ಮಹಿಳಾ ಸಾಹಿತ್ಯ ಶೋಧಿಸಲು ಹೊಸ ರೂಪಕಗಳನ್ನು ಕಂಡುಹಿಡಿಯಬೇಕು’ ಎಂದರು.

‘ಅನೇಕ ಕೌಟುಂಬಿಕ ಸಂಕಟಗಳೇ ಮಹಿಳೆಯರಿಗೆ ಹೊಸ ಲಯಗಳನ್ನು ಹಾಗೂ ವಸ್ತುಗಳ ಕುರಿತು ಸಾಹಿತ್ಯ ಬರೆಯಲು ಕಾರಣಗಳಾಗಿವೆ. ಮಹಿಳೆಯರು ಬರೆಯುವ ಹಾಗೂ ಆಯ್ಕೆ ಮಾಡುವ ವಿಷಯಗಳಿಗೂ ಹಾಗೂ ಅವರ ಸಾಮಾಜಿಕ ಮತ್ತು ಕೌಟುಂಬಿಕ ಬಿಕ್ಕಟ್ಟುಗಳಿಗೂ ಸಾಮ್ಯತೆ ಇರುವುದನ್ನು ಗಮನಿಸಬಹುದು. ಹಾಗೆಯೇ ಇಡೀ ಭಾರತದಲ್ಲಿ ಮನೋರೋಗವನ್ನು ಗುಣಪಡಿಸುವ ಕೇಂದ್ರಗಳಾಗಿರುವ ದರ್ಗಾ ಮತ್ತು ಗದ್ದುಗೆಗಳಿಗೆ ಭೇಟಿ ನೀಡುವವರಲ್ಲಿ ಮಹಿಳೆಯರೇ ಹೆಚ್ಚಾಗಿರುತ್ತಾರೆ. ಇವರು ಭಾವನಾತ್ಮಕ ರಕ್ಷಣೆಯನ್ನು ಕಳೆದುಹಾಕಿರುವ ಸಮಾಜದ ಉತ್ಪನ್ನಗಳು. ದೇಶದಲ್ಲಿ ದೈಹಿಕ ಆರೋಗ್ಯದ ಬಗ್ಗೆ ಇರುವಷ್ಟು ಕಾಳಜಿ ಮಾನಸಿಕ ಆರೋಗ್ಯದ ಬಗ್ಗೆ ಇಲ್ಲ ಎಂಬುದು ಇದರಿಂದಲೇ ಸಾಭೀತಾಗುತ್ತದೆ. ಇದಕ್ಕೆ ಸಾಮಾಜಿಕ ಅಭದ್ರತೆಯೂ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗದ ಮುಖ್ಯಸ್ಥ ಡಾ. ನಿಜಲಿಂಗಪ್ಪ ಮಟ್ಟಿಹಾಳ, ‘ಅಡುಗೆ ಮನೆ ಸಾಹಿತ್ಯ ಎಂದು ಮಹಿಳೆಯರ ಸಾಹಿತ್ಯವನ್ನು ಮೂದಲಿಸಿದವರು ವಿಕೃತ ಮನಸ್ಸಿನವರು. ಆದರೆ ಆ ಅಡುಗೆ ಮನೆಯಿಂದಲೇ ಶ್ರೇಷ್ಠವಾದ ಸಾಹಿತ್ಯಗಳು ಈವರೆಗೂ ಹೊರಬಂದಿವೆ ಎಂಬುದನ್ನು ಯಾರೂ ಮರೆಯಬಾರದು’ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ಶಾಂತಾ ಇಮ್ರಾಪುರ, ಕಾರ್ಯಾಧ್ಯಕ್ಷ ಡಾ. ನಿಂಗಪ್ಪ ಮುದೇನೂರು, ಡಾ. ಮಲ್ಲಪ್ಪ ಎನ್. ಬಂಡಿ ಇದ್ದರು.

ಇದಕ್ಕೂ ಪೂರ್ವದಲ್ಲಿ ನಡೆದ ಸಾಂಸ್ಖೃತಿಕ ಚಳವಳಿಗಳು ಮತ್ತು ಮಹಿಳಾ ಅಭಿವ್ಯಕ್ತಿ ಕುರಿತು ಗೋಷ್ಠಿಯಲ್ಲಿ ಡಾ. ಅನಿತಾ ಗುಡಿ, ಡಾ. ವಿನಯಾ, ಡಾ. ಮುಮ್ತಾಜ್ ಬೇಗಂ, ಡಾ, ಭಾರತಿ ದೇವಿ ವಿಷಯ ಮಂಡಿಸಿದರು. ‘ಸಮಕಾಲೀನ ಸಾಂಸ್ಕೃತಿಕ ಸಂದರ್ಭ ಹಾಗೂ ಮಹಿಳಾ ಅಭಿವ್ಯಕ್ತಿ’ ವಿಷಯದ ಗೋಷ್ಠಿಯಲ್ಲಿ ಡಾ. ಆನಂದ ಋಗ್ವೇದಿ, ಡಾ. ವಿಕ್ರಮ ವಿಸಾಜಿ, ಸಿ.ಜಿ.ಮಂಜುಳಾ ಮಾತನಾಡಿದರು.

ಮಹಿಳಾ ಸಂವೇದನೆ ರಹಿತ ಪಂಥ ‘ನವ್ಯ’

‘ಕನ್ನಡದಲ್ಲಿ ಅತ್ಯಂತ ಮಹಿಳಾ ಸಂವೇದಿ ರಹಿತ ಪಂಥವಾಗಿದೆ ಎಂದರೆ ಅದು ‘ನವ್ಯ’ ಮಾತ್ರ’ ಎಂದು ಡಾ. ರಹಮತ್ ತರೀಕೆರೆ ಹೇಳಿದರು.

‘ತೇಜಸ್ವಿ ಸಾಹಿತ್ಯದಲ್ಲಿ ಅಡುಗೆ ಮನೆಯೇ ಇಲ್ಲ. ಅದು ಒಂದು ರೀತಿಯ ಲಿಂಗ ಅಸೂಕ್ಷ್ಮತೆ ಎನ್ನಬಹುದು. ಮಹಿಳಾ ಸಾಹಿತ್ಯವು ಅತ್ಯಂತ ಸಮೃದ್ಧವಾಗಿ, ಬಹುಮುಖಿಯಾಗಿ ಬೆಳೆದಿದ್ದರೂ, ಡಾ. ಗಿರಡ್ಡಿ ಅವರು ತಮ್ಮ ವಿಮರ್ಶೆಗಳಲ್ಲಿ ಮಹಿಳಾ ಸಾಹಿತ್ಯದ ಕುರಿತು ಅತ್ಯಂತ ತುಚ್ಛವಾದ ಮಾತುಗಳಲ್ಲಿ ಬರೆದಿದ್ದಾರೆ. ಇದು ಖಂಡನಾರ್ಹ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.