ADVERTISEMENT

ಫೇಸ್‌ಬುಕ್‌ನ ಸಾಲದ ಜಾಹೀರಾತು ನಂಬಿ ₹92,449 ಕಳೆದುಕೊಂಡ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 4:34 IST
Last Updated 30 ಮಾರ್ಚ್ 2023, 4:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಉಡುಪಿ: ಫೇಸ್‌ಬುಕ್‌ನಲ್ಲಿ ಸಾಲದ ಜಾಹೀರಾತು ನಂಬಿ ಅರ್ಜಿ ಸಲ್ಲಿಸಿದ ಕೀರ್ತಿರಾಜ್ ಎಂಬಾತ ವಂಚಕರ ಜಾಲಕ್ಕೆ ಸಿಲುಕಿ ₹ 92,449 ಕಳೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕೀರ್ತಿರಾಜ್ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ರಿಲಯನ್ಸ್ ಕಂಪೆನಿಯ ಪ್ರತಿನಿಧಿ ಎಂದು ಸುಳ್ಳು ಹೇಳಿ ಸಾಲ ಮಂಜೂರಾಗಿದ್ದು ಲೀಗಲ್ ಚಾರ್ಜ್‌ ₹ 2,599 ಪಾವತಿಸುವಂತೆ ಗೂಗಲ್ ಪೇ ಕ್ಯೂಆರ್ ಕೋಡ್ ಕಳಿಸಿದ್ದಾನೆ.

ಇದನ್ನು ನಂಬಿದ ಕೀರ್ತಿರಾಜ್ 2,599 ಪಾವತಿಸಿದ್ದಾರೆ. ಬಳಿಕ ಟಿಡಿಎಸ್‌, ಜಿಎಸ್‌ಟಿ ಹೆಸರಿನಲ್ಲ ಹಲವು ಬಾರಿ 92,449 ಪಡೆದು ವಂಚನೆ ಎಸಗಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಇಸ್ಪೀಟ್‌: ₹ 1,37,800 ವಶ

ಮಣಿಪಾಲ: ಹೆರ್ಗ ಗ್ರಾಮದ ಪರ್ಕಳ ಸಂಧ್ಯಾ ಹೊಟೇಲ್ ಕಟ್ಟಡದ 1ನೇ ಮಹಡಿಯ ಕೋಣೆಯಲ್ಲಿ ಇಸ್ಪೀಟು ಆಡುತ್ತಿದ್ದ ಸಂದರ್ಭ ದಾಳಿ ನೆಡಸಿದ ಪೊಲೀಸರು ಅನಿಲ, ವಿಶ್ವನಾಥ, ದೀಕ್ಷಿತ್, ಜೀವರಾಜ್, ವರುಣ್, ರವಿಚಂದ್ರ ನಾಯ್ಕ್, ದಿನೇಶ, ಗಣೇಶ, ಅನೀಶ, ಸತೀಶ್, ಅನಿಲ್, ಸತೀಶ್, ರಮೇಶ, ಸುಧಾಕರ್, ಹರೀಶ, ನಿತೇಶ್, ಪ್ರಶಾಂತ, ಜ್ಞಾನೇಶ, ಶಿವಶೆಟ್ಟಿ, ಸಲೀಂ, ಕರುಣಾಕರ್ ಎಂಬುವರನ್ನು ವಶಕ್ಕೆ ಪಡೆದು ₹ 1,37,800 ಹಾಗೂ 7 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹ 1,97,999 ಆನ್‌ಲೈನ್ ವಂಚನೆ

ಉಡುಪಿ: ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ ಜ್ಯೋತಿ ಎಂಬುವರು ₹ 1,97,999 ಕಳೆದುಕೊಂಡಿದ್ದಾರೆ.

ವೆಬ್‌ಸೈಟ್‌ನಲ್ಲಿ ಮುಖಕ್ಕೆ ಹಚ್ಚುವ ಕ್ರೀಂ ಹುಡುಕುವಾಗ ಸಿಕ್ಕ ಮೊಬೈಲ್ ನಂಬರ್‌ಗೆ ಕರೆ ಮಾಡಿದ ಮಹಿಳೆಯ ಮೊಬೈಲ್‌ಗೆ ವಂಚಕ ಲಿಂಕ್ ಕಳಿಸಿದ್ದಾನೆ. ಕಂಪೆನಿಯ ಪ್ರತಿನಿಧಿಯೇ ಎಂದು ನಂಬಿದ ಮಹಿಳೆ ಲಿಂಕ್‌ನಲ್ಲಿ ಬ್ಯಾಂಕ್‌ ಖಾತೆಯ ವಿವರಗಳನ್ನು ನಮೂದಿಸಿದ್ದಾರೆ.

ಬಳಿಕ ಕರ್ನಾಟಕ ಬ್ಯಾಂಕ್ ಖಾತೆಯಿಂದ ಕ್ರಮವಾಗಿ ₹ 99,999, ₹90,000, ₹ 8,000 ಹಣ ದೋಚಿದ್ದಾನೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.