ADVERTISEMENT

ಕೊಕ್ಕರೆಬೆಳ್ಳೂರು; 94 ಪ್ರಬೇಧಗಳ ಪಕ್ಷಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 15:47 IST
Last Updated 18 ಮಾರ್ಚ್ 2023, 15:47 IST
ಕೊಕ್ಕರೆಬೆಳ್ಳೂರು ಪಕ್ಷಧಾಮ ವ್ಯಾಪ್ತಿಯ ಶಿಂಷಾ ನದಿ ತೀರದಲ್ಲಿ ಪಕ್ಷಿ ಪ್ರಿಯರು ಪಕ್ಷಿ ವೀಕ್ಷಣೆ ಮಾಡಿದರು
ಕೊಕ್ಕರೆಬೆಳ್ಳೂರು ಪಕ್ಷಧಾಮ ವ್ಯಾಪ್ತಿಯ ಶಿಂಷಾ ನದಿ ತೀರದಲ್ಲಿ ಪಕ್ಷಿ ಪ್ರಿಯರು ಪಕ್ಷಿ ವೀಕ್ಷಣೆ ಮಾಡಿದರು   

ಭಾರತೀನಗರ: ಸಮೀಪದ ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ ಶನಿವಾರ ನಡೆದ ಪಕ್ಷಿಹಬ್ಬದಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ 300ಕ್ಕೂ ಹೆಚ್ಚು ಪಕ್ಷಿಪ್ರಿಯರು ಗ್ರಾಮದ ವಿವಿಧೆಡೆ ಸಂಚರಿಸಿ ಪಕ್ಷಿ ವೀಕ್ಷಣೆ ನಡೆಸಿದರು.

ಪ್ರವಾಸಿಗರ ಆಕರ್ಷಣೆ, ಜನರಲ್ಲಿ ಪಕ್ಷಿಗಳ ಅರಿವು ಮೂಡಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಒಂದು ದಿನದ ಪಕ್ಷ ಹಬ್ಬ ಆಯೋಜನೆ ಮಾಡಲಾಗಿತ್ತು. ಪಕ್ಷಿ ಪ್ರಿಯರು ಗ್ರಾಮದ ಜನರ ಜೊತೆ ಸಂಚರಿಸಿ ಪಕ್ಷಿ ವೀಕ್ಷಣೆ ಮಾಡಿದರು.

ಪೆಲಿಕಾನ್‌, ಪೈಂಟೆಡ್‌ ಸ್ಟಾರ್ಕ್‌, ಕಾರ್ಮೋರೆಂಟ್ಸ್‌(ನೀರು ಕಾಗೆ), ಕ್ಯಾಟಲಿ ಇಗ್ರೇಟ್‌, ನೈಟ್‌ ಹೆರಾನ್, ಪಾಂಡ್‌ ಹೆರಾನ್‌(ಕೊಳದ ಬಕ), ಬ್ಲಾಕ್‌ ಹೈಬೀಸ್ ಮುಂತಾದ ಸ್ಥಳೀಯ ಪಕ್ಷಿ ವೀಕ್ಷಿಸಿದರು. ಈ ಸಂದರ್ಭದಲ್ಲಿ 94 ವಿವಿಧ ಪ್ರಬೇಧದ ಪಕ್ಷಿಗಳನ್ನು ವೀಕ್ಷಣೆ ಬಗ್ಗೆ ದಾಖಲಿಸಿಕೊಂಡರು.

ADVERTISEMENT

ಹೆಜ್ಜಾರ್ಲೆ ಬಳಗದ ಲಿಂಗೇಗೌಡ, ಅಪ್ಪಾಜಿಗೌಡ, ನಾಗೇಶ್‌, ಕೃಷ್ಣ ಪಕ್ಷಿಪ್ರಿಯರಿಗೆ ಸಹಕಾರ ನೀಡಿದರು. ಶಿಂಷಾ ನದಿ ತೀರ, ಇಗ್ಗಲೂರು, ಸೋಮೇಶ್ವರ ದೇವಾಲಯ, ಚಾಕನಹಳ್ಳಿ ಬೆಳ್ಳೂರು ಮಧ್ಯದ ಸೇತುವೆ, ತೈಲೂರು ಕೆರೆ, ಗೊಲ್ಲರದೊಡ್ಡಿ ಕೆರೆ ಪಕ್ಷಿ ವೀಕ್ಷಣೆ ನಡೆಯಿತು.

ಪೆಲಿಕಾನ್‌ಗಳಿಗೆ ಜಿಪಿಎಸ್‌ ಉಂಗುರ ತೊಡಿಸಿ ಚಲನವಲನದ ಮೇಲೆ ನಿಗಾ ವಹಿಸಿರುವ ಬಗ್ಗೆ, ಪೆಲಿಕಾನ್‌ ಹಾಗೂ ಪೈಂಟೆಡ್‌ ಸ್ಟಾರ್ಕ್‌ಗಳ ಜೀವನ ಶೈಲಿ ಬಗ್ಗೆ ಹಿರಿಯ ಪರಿಸರವಾದಿ ಕಾರ್ತಿಕೇಯನ್‌, ಸಂಶೋಧನಾರ್ಥಿ ಅಕ್ಷತಾ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಪಕ್ಷಿಧಾಮ ಗುರುತಿಸುವ ಕ್ಯೂಆರ್‌ ಕೋಡ್‌, ಸರ್ಕ್ಯುಟ್‌ ಮ್ಯಾಪ್‌ ಬಿಡುಗಡೆಗೊಳಿಸಲಾಯಿತು. ಪಕ್ಷಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸವು ಕರಪತ್ರ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.