ADVERTISEMENT

ಜೆಡಿಎಸ್‌ನಿಂದ ರೈತರ ಸಮಸ್ಯೆಗೆ ಪರಿಹಾರ: ಎಚ್‌.ಡಿ.ಕುಮಾರಸ್ವಾಮಿ ಅಭಿಮತ

ಮಾಚಹಳ್ಳಿಯಲ್ಲಿ ಬಸವೇಶ್ವರ ಪ್ರತಿಮೆ ಅನಾವರಣ; ಎಚ್‌.ಡಿ.ಕುಮಾರಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 14:38 IST
Last Updated 19 ಮಾರ್ಚ್ 2023, 14:38 IST
ಮಾಚಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಸಮಾರಂಭಕ್ಕೆ ಜೆಡಿಎಸ್‌ ಶಾಸಕಾಂಗದ ಪಕ್ಷದ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ಸಿ.ಎಸ್‌.ಪುಟ್ಟರಾಜು ಬಿ.ಆರ್‌.ರಾಮಚಂದ್ರು, ಅಶ್ವಿನ್‌ಕುಮಾರ್,  ಸಿ.ಅಶೋಕ್, ಟಿ.ಯಶವಂತ್, ಮಲ್ಲೇಶ್, ಶಂಕರೇಗೌಡ ಇದ್ದರು
ಮಾಚಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಸಮಾರಂಭಕ್ಕೆ ಜೆಡಿಎಸ್‌ ಶಾಸಕಾಂಗದ ಪಕ್ಷದ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ಸಿ.ಎಸ್‌.ಪುಟ್ಟರಾಜು ಬಿ.ಆರ್‌.ರಾಮಚಂದ್ರು, ಅಶ್ವಿನ್‌ಕುಮಾರ್,  ಸಿ.ಅಶೋಕ್, ಟಿ.ಯಶವಂತ್, ಮಲ್ಲೇಶ್, ಶಂಕರೇಗೌಡ ಇದ್ದರು   

ಮಂಡ್ಯ: ‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಯುವಕರು ನಿರುದ್ಯೋಗಿಗಳಾಗಿಯೇ ಇದ್ದಾರೆ, ಇದನ್ನು ಹೋಗಲಾಡಿಸುವ ಉದ್ದೇಶದಿಂದ ಜೆಡಿಎಸ್‌ ಪಕ್ಷ ಪಂಚಯಾತ್ರೆ ಯೋಜನೆ ಜಾರಿಗೆ ತರಲು ಮುಂದಾಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಬಸವೇಶ್ವರರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಜೆಡಿಎಸ್‌ ಅಧಿಕಾರಕ್ಕೆ ಬಂದ ತಕ್ಷಣವೇ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಬಡತನ, ನಿರುದ್ಯೋಗ, ಕೃಷಿ ಬಿಕ್ಕಟ್ಟಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿಯ ತನಕ ದೊರೆತಿಲ್ಲ. ಬಡವರು ಬಡವರಾಗಿಯೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಬಸವೇಶ್ವರರ ತತ್ವಸಿದ್ಧಾಂತಗಳು ಮತ್ತು ಮಾರ್ಗದರ್ಶನಗಳು ರೈತರಿಗೆ ಆಸರೆಯಾಗಿವೆ’ ಎಂದರು.

ADVERTISEMENT

‘ಬಸವೇಶ್ವರರ ತತ್ವಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾರಿಯಾಗಬೇಕು. 12ನೇ ಶತಮಾನದಲ್ಲೇ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಜಗಜ್ಯೋತಿ ಬಸವೇಶ್ವರರು ಶ್ರಮಿಸಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಿ, ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.

‘ಪ್ರಸ್ತುತ ಸಮಾಜದಲ್ಲಿ ಹತ್ತಾರು ರೀತಿಯ ತಾರತಮ್ಯಗಳು, ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಅವುಗಳಿಗೆ ಬಸವಣ್ಣನವರ ಮಾತುಗಳಿಂದಲೇ ಪರಿಹಾರ ಸಿಗಲಿವೆ. ಗ್ರಾಮೀಣ ಭಾಗದಲ್ಲಿ ಅವರ ಪ್ರತಿಮೆ ಸ್ಥಾಪನೆಯಾಗಿರುವುದು ಸಂತಸದ ವಿಚಾರ. ಅವರ ತತ್ವ ಸಿದ್ಧಾಂತಗಳನ್ನು ಗ್ರಾಮೀಣ ಭಾಗದ ಜನರು ಅಳವಡಿಸಿಕೊಳ್ಳಬೇಕು’ ಎಂದರು.

‘ಶಾಸಕ ಸಿ.ಎಸ್.ಪುಟ್ಟರಾಜು ಅವರು ಈ ಭಾಗದ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾಯಕ ಮಾಡಿದ್ದಾರೆ. ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸುತ್ತಿದ್ದಾರೆ. ಯಾವುದೇ ಕುಟುಂಬದಲ್ಲಿ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಸ್ಪಂದಿಸುವ ಪ್ರಮಾಣಿಕ ಜನಸೇವಕ. ಚುನಾವಣೆಯಲ್ಲಿ ನೀವು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಅವರಿಗೆ ಆಶೀರ್ವಾದ ಮಾಡಿದರೆ ಈ ಭಾಗದ ಸಂಪೂರ್ಣ ಅಭಿವೃದ್ಧಿಗೆ ನೆರವಾಗಲಿದೆ’ ಎಂದರು.

‘ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವವಕುಮಾರ ಸ್ವಾಮೀಜಿ ಅವರು ಧಾರ್ಮಿಕ ಕ್ಷೇತ್ರದಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಬೆಳೆದವರು. ಪಾಂಡವಪುರ ಪಂಚರತ್ನ ರಥಯಾತ್ರೆ ವೇಳೆಯೂ ರುದ್ರಾಕ್ಷಿ ಹಾರವನ್ನು ಅಭಿಮಾನಿಗಳು ತಂದಾಗ, ಅದನ್ನು ನಾನು ಧರಿಸುವುದು ಅಪಚಾರವಾಗುತ್ತದೆ ಎಂದು ಹೇಳಿದೆ. ನಂತರ ಅದನ್ನು ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಹಾಕಲಾಯಿತು. ಜೀವನದಲ್ಲಿ ಗುರು, ದೇವರನ್ನು ನಂಬಿ ಬದುಕಬೇಕು’ ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು, ಟಿ.ನರಸೀಪುರ ಶಾಸಕ ಅಶ್ವಿನ್‌ಕುಮಾರ್, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಮುಖಂಡರಾದ ಸಿ.ಅಶೋಕ್, ಟಿ.ಯಶವಂತ್, ಮಲ್ಲೇಶ್, ಶಂಕರೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.