ADVERTISEMENT

ಉರಿ, ನಂಜು ಬಿಟ್ಟು ರೈತರ ಕಡೆ ನೋಡಿ: ಬಿಜೆಪಿ ನಾಯಕರ ವಿರುದ್ಧ ಎಚ್‌ಡಿಕೆ ಆಕ್ರೋಶ

ಬಿಜೆಪಿ ಮುಖಂಡರ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:43 IST
Last Updated 19 ಮಾರ್ಚ್ 2023, 19:43 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಮಂಡ್ಯ: ‘ಉರಿಗೌಡ, ದೊಡ್ಡನಂಜೇಗೌಡರ ಕತೆ ಕಟ್ಟಿಕೊಂಡು ಇರ್ತೀರಾ, ಇಲ್ಲ, ಹೊಲ ಉಳುಮೆ ಮಾಡುತ್ತಿರುವ ಬೋರೇಗೌಡನ ಕಡೆ ನೋಡ್ತೀರಾ. ನಿಮಗೆ ಮಾಡಲು ಬೇರೆ ಕೆಲಸ ಇಲ್ಲವಾ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಿಜೆಪಿಯವರು ಕಾಲ್ಪನಿಕ ಕಟ್ಟು ಕತೆ ಇಟ್ಟಕೊಂಡು ಆಟವಾಡುತ್ತಿದ್ದಾರೆ. ಆಲಿಕಲ್ಲು ಮಳೆ ಬಿದ್ದು ಜನರು ಸಾಯುತ್ತಿದ್ದಾರೆ. ಜನರ ಕಡೆ ನೋಡಬೇಕೋ ಅಥವಾ ಕಾಲ್ಪನಿಕ ಕತೆಗಳಿಗೆ ಪ್ರಾಶಸ್ತ್ಯ ನೀಡಬೇಕೋ’ ಎಂದು ಪ್ರಶ್ನಿಸಿದರು.

‘ಯಾವನು ಸಿನಿಮಾ ಮಾಡುತ್ತಾನೋ ಮಾಡಿಕೊಳ್ಳಲಿ, ಕತೆಯೇನೂ ಸ್ವಂತಿಕೆಯದ್ದಲ್ಲ, ಕಟ್ಟು ಕತೆ ಇಟ್ಟಕೊಂಡು ಸಿನಿಮಾ ಮಾಡುತ್ತಾರೆ. ಸುವರ್ಣ ಮಂಡ್ಯ ಪುಸ್ತಕದಲ್ಲಿ ಹೈದರಾಲಿ, ಟಿಪ್ಪು ವಿರುದ್ಧ ಉರಿಗೌಡ, ನಂಜೇಗೌಡ ಸೆಟೆದು ನಿಂತರು ಅಂತಿದೆ. ಅವರು ಟಿಪ್ಪುವಿನ ಕತ್ತು ಕೊಯ್ದರು ಅಂತಿದೆಯಾ? ಯುದ್ಧ ಮಾಡಿ ತಲೆ ತೆಗೆದರು ಅಂತಿದೆಯಾ’ ಎಂದು ಪ್ರಶ್ನಿಸಿದರು.

ADVERTISEMENT

‘ಉರಿಗೌಡ, ನಂಜೆಗೌಡ ಇದ್ದರೊ, ಇರಲಿಲ್ಲವೋ ಎಂಬುದನ್ನು ಆಮೇಲೆ ನೋಡೋಣ. ನಾನೀಗ ಚುನಾವಣೆ ನಡೆಸಬೇಕು. ಬಿಜೆಪಿಯವರಿಗೆ ಮಾಡೋದಕ್ಕೆ ಬೇರೆ ಕೆಲಸವಿಲ್ಲ. ಅವರು ಉರಿಗೌಡ, ನಂಜೇಗೌಡರಿಗೆ ದೊಡ್ಡ ಪ್ರತಿಮೆಯಲ್ಲ, ದೇವಸ್ಥಾನವನ್ನೇ ಕಟ್ಟಿಕೊಳ್ಳಲಿ. ಇದರಿಂದ ಬಿಜೆಪಿಗೆ ಏನೂ ಉಪಯೋಗ ಆಗುವುದಿಲ್ಲ. ಈ ಕಟ್ಟು ಕತೆ ಕೇಳಿ ಜನರು ಬಂದು ವೋಟು ಹಾಕುತ್ತಾರಾ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ನಾಯಕರಿಗೆ ಜೆಡಿಎಸ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ಅವರ ನಾಯಕನಿಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ. ಒಬ್ಬ ಶಾಸಕಾಂಗ ಪಕ್ಷದ ನಾಯಕ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಸ್ಪಷ್ಟನೆ ಇಲ್ಲ. ನಾವೇನೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳನ್ನು ಸೆಳೆಯುತ್ತಿಲ್ಲ, ಅವರನ್ನು ಸೆಳೆಯಲು ಜೆಡಿಎಸ್‌ ಪಕ್ಷವೇನೂ ಅಯಸ್ಕಾಂತವಲ್ಲ’ ಎಂದರು.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ಆಜಾನ್‌ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ‘ಇಂತಹ ಸೂಕ್ಷ್ಮ ವಿಚಾರಗಳು ಮುನ್ನೆಲೆಗೆ ಬರಲು ಬಿಜೆಪಿ ಕಾರಣ. ಕೆಲವು ಕಿಡಿಗೇಡಿಗಳಿಂದ ಇಂತಹ ಗೊಂದಲ ಸೃಷ್ಟಿಯಾಗುತ್ತವೆ. ಈಶ್ವರಪ್ಪ ಅಥವಾ ಬಿಜೆಪಿಯ ಇನ್ನ್ಯಾವನೋ ಮಾತನಾಡುವಾಗ ಹದ್ದುಬಸ್ತಿನಲ್ಲಿರಬೇಕು. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು’ ಎಂದರು.

****

ಉರಿಗೌಡ– ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರ ಇಲ್ಲ. ಅದಕ್ಕೆ ನಾನು ಚಿತ್ರಕತೆಯನ್ನೇನೂ ಬರೆಯುತ್ತಿಲ್ಲ. ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ಅಭಿಮಾನವಿದೆ.

- ಡಾ.ಸಿ ಎನ್ ಅಶ್ವತ್ಥನಾರಾಯಣ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.