ADVERTISEMENT

ಸ್ವಾಭಿಮಾನ ಎನ್ನುವುದು ಪಾತ್ರವಲ್ಲ; ಸಂಸದೆ ಸುಮಲತಾ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 4:08 IST
Last Updated 20 ಸೆಪ್ಟೆಂಬರ್ 2021, 4:08 IST
ಮೈಷುಗರ್‌ ಅನಿರ್ದಿಷ್ಟಾವಧಿ ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿ ಬೆಂಬಲ ನೀಡಿದರು
ಮೈಷುಗರ್‌ ಅನಿರ್ದಿಷ್ಟಾವಧಿ ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿ ಬೆಂಬಲ ನೀಡಿದರು   

ಮಂಡ್ಯ: ‘ಸಂಸದೆ ಸುಮಲತಾ ಅವರು ‘ಸ್ವಾಭಿಮಾನ’ ಎನ್ನುವುದನ್ನು ಪಾತ್ರದ ರೀತಿ ತಿಳಿದುಕೊಂಡಿದ್ದಾರೆ. ಮತ ಕೇಳುವಾಗ ಒಂದು ಪಾತ್ರ, ಮೈಷುಗರ್‌ ಕಾರ್ಖಾನೆ ವಿಷಯದಲ್ಲಿ ಮತ್ತೊಂದು ಪಾತ್ರ ಎಂಬಂತೆ ಅವರು ನಡೆದುಕೊಳ್ಳುತ್ತಿದ್ದಾರೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡಟಿ.ಎಲ್‌.ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಭಾನುವಾರಕ್ಕೆ 7 ದಿನ ಪೂರೈಸಿದ್ದು, ಧರಣಿಗೆ ಬೆಂಬಲ ನೀಡಿ ಅವರು ಮಾತನಾಡಿದರು.

‘ನಿಮ್ಮ ಪಾತ್ರಗಳನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಸಂಸದರು ಅರ್ಥ ಮಾಡಿಕೊಳ್ಳಬೇಕು. ಈಗಲಾದರೂ ಮೈಷುಗರ್‌ ಉಳಿವಿಗೆ ಮುಂದಾಗಬೇಕು. ಮೈಷುಗರ್‌ ಕಾರ್ಖಾನೆಯನ್ನು ಕಳಚಿ ಹಾಕಿದರೆ ಮಂಡ್ಯ ಜಿಲ್ಲೆಯ ಸ್ವಾಭಿಮಾನವನ್ನೇ ಕಳಚಿದಂತೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮೈಷುಗರ್‌ ಉಳಿವಿಗೆ ಬೆಂಬಲವಾಗಿ ನಿಂತು ರೈತರ ಪರವಾಗಿ ಕೆಲಸ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಮೈಷುಗರ್‌ ಕಾರ್ಖಾನೆಯ ವಿಷಯದಲ್ಲಿ ರೈತರಿಗೆ ಬೇಕಾಗಿರುವುದು ಸರ್ಕಾರಿ ಸ್ವಾಮ್ಯದಲ್ಲೇ ತಕ್ಷಣ ಕಬ್ಬು ಅರೆಯುವುದು ಮಾತ್ರ. ಸಂಪೂರ್ಣ ವಾಗಿ ಆಧುನೀಕರಣಗೊಳಿಸಿ ಅತ್ಯಾಧುನಿ ಕವಾದ ಸಕ್ಕರೆ ಹೆಚ್ಚು ಕೊಡುವಂಥ ಹೊಸ ಮಿಲ್‌ಅನ್ನು ಅಳವಡಿಸಬೇಕು. ಸರ್ಕಾರವು ₹ 600 ಕೋಟಿಯನ್ನು ಕಾರ್ಖಾನೆಗೆ ಖರ್ಚು ಮಾಡುವುದಾದರೆ ಇಡೀ ರಾಜ್ಯದಲ್ಲಿಯೇ ಕಬ್ಬು ಬೆಳೆಗಾರರಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ. ರೈತರ ₹ 10 ಸಾವಿರ ಕೋಟಿಯನ್ನು ಖಾಸಗಿ ಸಕ್ಕರೆ ಕಂಪನಿಗಳು ಪ್ರತಿವರ್ಷ ಕದಿಯುತ್ತಿವೆ. ಅದಕ್ಕೆ ಕಡಿವಾಣ ಹಾಕಿ ಆ ಹಣವನ್ನು ರೈತರ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಒತ್ತಾಯಿಸಿದರು.

ಸಚಿವ ಮುರುಗೇಶ್‌ ನಿರಾಣಿ ಅಂತಹ ವ್ಯಕ್ತಿ ಕೇವಲ ಒಂದು ಸಣ್ಣ ಆಲೆಮನೆಯಿಂದ ಬಂದು ಒಂದು ಸಕ್ಕರೆ ಕಾರ್ಖಾನೆಗಳ ಸಾಮ್ಯಾಜ್ಯವನ್ನೇ ಕಟ್ಟಿದ್ದಾರೆ. ಅಂತಹವರು ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಮೈಷುಗರ್‌ ಕಾರ್ಖಾನೆ ಹೊರೆಯಾಗಿದೆಯೇ? ಸರ್ಕಾರ ಅತ್ಯುನ್ನತ ಅಧಿಕಾರಿಗಳನ್ನು ಇಟ್ಟುಕೊಂಡಿದ್ದರೂ ಮೈಷುಗರ್ ಕಾರ್ಖಾನೆಯನ್ನು ಗುತ್ತಿಗೆ ನೀಡಲು ಹೊರಟಿದೆ ಎಂದು ಟೀಕಿಸಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಸಂಚಾಲಕರಾದ ಟಿ.ಯಶವಂತ, ಹನುಮೇಶ್‌, ಶಿವಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್‌, ಮೈಷುಗರ್‌ ನಿವೃತ್ತ ಅಧಿಕಾರಿ ದೇವರಾಜು, ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.