ADVERTISEMENT

ಎಸ್‍ಸಿಡಿಸಿಸಿ ಬ್ಯಾಂಕ್ ರಾಜ್ಯಕ್ಕೆ ಪ್ರಥಮ

ಬೆಳೆ ವಿಮಾ ಯೋಜನೆ ಅನುಷ್ಠಾನದಲ್ಲಿ ಬ್ಯಾಂಕ್‌ ಯಶಸ್ವಿ: ರಾಜೇಂದ್ರ ಕುಮಾರ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 4:30 IST
Last Updated 20 ಜುಲೈ 2021, 4:30 IST
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್) ‘ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ’ಯನ್ನು ಸಮರ್ಪಕವಾಗಿ ಜಾರಿಗೊಳಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರಯುಕ್ತ ಎಸ್‍ಸಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸೋಮವಾರ ಕೆನರಾ ಬ್ಯಾಂಕ್ ಹಾಗೂ ಲೀಡ್ ಡಿಸ್ಟ್ರಿಕ್ಟ್ ಬ್ಯಾಂಕ್ ವತಿಯಿಂದ ಅಭಿನಂದಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್) ‘ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ’ಯನ್ನು ಸಮರ್ಪಕವಾಗಿ ಜಾರಿಗೊಳಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರಯುಕ್ತ ಎಸ್‍ಸಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸೋಮವಾರ ಕೆನರಾ ಬ್ಯಾಂಕ್ ಹಾಗೂ ಲೀಡ್ ಡಿಸ್ಟ್ರಿಕ್ಟ್ ಬ್ಯಾಂಕ್ ವತಿಯಿಂದ ಅಭಿನಂದಿಸಲಾಯಿತು.   

ಮಂಗಳೂರು: ಕೇಂದ್ರ ಸರ್ಕಾರದ ಬಹು ಮಹತ್ವಾಕಾಂಕ್ಷೆಯ ರೈತರಿಗಾಗಿ ‘ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ’ಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಮರ್ಪಕವಾಗಿ ಜಾರಿ ಗೊಳಿಸಿ, ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.

ಬ್ಯಾಂಕಿನಲ್ಲಿ ಸೋಮವಾರ ನಡೆದ ಕೆನರಾ ಬ್ಯಾಂಕ್ ಹಾಗೂ ಲೀಡ್‌ ಜಿಲ್ಲಾ ಬ್ಯಾಂಕ್‌ ವತಿಯಿಂದ ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕೆನರಾ ಬ್ಯಾಂಕ್ ಮಹಾಪ್ರಬಂಧಕ ಯೋಗೀಶ್ ಆಚಾರ್ ಮಾತನಾಡಿ, ಸಹಕಾರ ತತ್ವದಡಿ ಕಾರ್ಯನಿರ್ವಹಿ ಸುತ್ತಿರುವ ಎಸ್‍ಸಿಡಿಸಿಸಿ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೈತಪರ ನಿಲುವು ಹಾಗೂ ಚಿಂತನೆಯಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ಕಾರ್ಯ ನಿರ್ವಹಿ ಸುತ್ತಿರುವುದು ಅಭಿನಂದನಾರ್ಹ. ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ವಿಮಾ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ಯಶಸ್ವಿಯಾಗಿದೆ. ಎಂ.ಎನ್. ರಾಜೇಂದ್ರ ಕುಮಾರ್ ಅವರ ದೂರದರ್ಶಿ ನಾಯಕತ್ವ ಇದಕ್ಕೆ ಪ್ರೇರಣೆಯಾಗಿದೆ ಎಂದರು.

ADVERTISEMENT

ಲೀಡ್ ಜಿಲ್ಲಾ ಬ್ಯಾಂಕ್‌ ಪ್ರಬಂಧಕ ಪ್ರವೀಣ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಎನ್. ನಾಯಕ್, ನಬಾರ್ಡ್ ಡಿಡಿಎಂ ಸಂಗೀತಾ ಕರ್ತ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್, ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಬ್ಯಾಂಕ್‌ನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ರಾಜು ಪೂಜಾರಿ, ಎಸ್.ಬಿ. ಜಯರಾಮ್ ರೈ, ಮಹೇಶ್ ಹೆಗ್ಡೆ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಟಿ.ಜಿ. ರಾಜಾರಾಮ್ ಭಟ್, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರವೀಂದ್ರ, ಮಹಾ ಪ್ರಬಂಧಕ ಗೋಪಿನಾಥ್ ಭಟ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

‘₹11.79 ಕೋಟಿ ಪ್ರೀಮಿಯಂ ಜಮೆ’: ಹವಾಮಾನ ವೈಪರೀತ್ಯದಿಂದ ಆಗುವ ಬೆಳೆ ಹಾನಿ ನಷ್ಟವನ್ನು ಭರಿಸಲು ಸರ್ಕಾರ ಕೈಗೊಂಡ ಈ ಯೋಜನೆಯ ಜಾರಿಯಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿದೆ. ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ ಮುನ್ನಡೆ ಸಾಧಿಸಿ ಎಸ್‍ಸಿಡಿಸಿಸಿ ಬ್ಯಾಂಕ್ ದಾಖಲೆ ನಿರ್ಮಿಸಿದೆ ಎಂದು ಎಂ.ಎನ್‌. ರಾಜೇಂದ್ರಕುಮಾರ್‌ ತಿಳಿಸಿದರು.

2021-22ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 3,45,421 ರೈತರು ಈ ಯೋಜನೆಯಡಿ ದಾಖಲಾತಿ ಪಡೆದಿದ್ದು, ಇವರಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ಮೂಲಕ 94,045 ರೈತರು ₹11.79 ಕೋಟಿ ವಿಮಾ ಪ್ರೀಮಿಯಂ ಜಮೆ ಮಾಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.