ADVERTISEMENT

‘ಶಾಲಾ ನಿರ್ವಹಣೆಗೆ ಪೋಷಕರಿಂದ ಶುಲ್ಕ ವಸೂಲಿಗೆ ವಿರೋಧ’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 16:31 IST
Last Updated 21 ಅಕ್ಟೋಬರ್ 2022, 16:31 IST

ಬೆಂಗಳೂರು: ‘ಮುಖ್ಯಮಂತ್ರಿ ಹಾಗೂ ಸಚಿವರ ಶೇ 40ರಷ್ಟು ಕಮಿಷನ್‌ ದಂಧೆಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿದ್ದು, ಶಿಕ್ಷಣ ಇಲಾಖೆಯು ಶಾಲಾ ಮಕ್ಕಳ ಪೋಷಕರಿಂದ ತಿಂಗಳಿಗೆ ₹100 ಪಡೆಯುವ ಹಂತಕ್ಕೆ ತಲುಪಿದೆ’ ಎಂದು ಆಮ್‌ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಲೇವಡಿ ಮಾಡಿದರು.

‘ಈ ಹಿಂದೆ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಶೂಗಳನ್ನು ಖರೀದಿಸುವಂತೆ ರಾಜ್ಯ ಸರ್ಕಾರವು ಶಾಲೆಗಳಿಗೆ ಆದೇಶ ಹೊರಡಿಸಿತ್ತು. ಈಗ ಡೆಸ್ಕ್‌, ವಿದ್ಯುತ್‌ ಬಿಲ್‌ ಇನ್ನಿತರ ಖರ್ಚುಗಳಿಗಾಗಿ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿ ತಿಂಗಳು ₹100 ಶುಲ್ಕ ಪಡೆಯುವಂತೆ ಶಿಕ್ಷಣ ಇಲಾಖೆಯು ಶಾಲೆಗಳ ಆಡಳಿತ ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿದೆ. ಬಿಜೆಪಿ ಆಡಳಿತದಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ಸರ್ಕಾರ ದಿವಾಳಿಯಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್‌ 3ರ ಪ್ರಕಾರ ಎಂಟನೇ ತರಗತಿವರೆಗೆ ಯಾವುದೇ ಅಡ್ಡಿಯಿಲ್ಲದೇ ಸರ್ಕಾರವು ಶಿಕ್ಷಣ ನೀಡಬೇಕಿದೆ. ಆದರೆ ರಾಜ್ಯ ಸರ್ಕಾರವು ಈ ಎರಡೂ ಕಾನೂನಿನ ಉದ್ದೇಶವನ್ನು ಗಾಳಿಗೆ ತೂರಿ, ಪೋಷಕರಿಂದ ಹಣ ವಸೂಲಿ ಮಾಡಲು ಮುಂದಾಗಿದೆ. ಹಣ ಪಾವತಿಸಲು ಸಾಧ್ಯವಾಗುವ ಪೋಷಕರ ಮಕ್ಕಳಿಗೆ ಮಾತ್ರ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದಂತಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.