ADVERTISEMENT

ಹುಲಿ ಪತ್ತೆಗೆ 70 ಟ್ರ್ಯಾಪಿಂಗ್‌ ಕ್ಯಾಮೆರಾ ಅಳವಡಿಕೆ

ವಯಸ್ಸಾದ ವನ್ಯಮೃಗಗಳ ಸೆರೆಗೆ ಕ್ರಮ: ಮಹೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 4:56 IST
Last Updated 12 ಸೆಪ್ಟೆಂಬರ್ 2021, 4:56 IST
ಹುಣಸೂರು ತಾಲ್ಲೂಕಿನ ಐಯ್ಯನಕೆರೆ ಹಾಡಿಯ ಬಾಲಕನನ್ನು ಕೊಂದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಮಹೇಶ್‌ ಕುಮಾರ್‌ ಅವರು ಅರಿವಳಿಕೆ ಮದ್ದು ನೀಡುವ ಬಂದೂಕನ್ನು ಪರಿಶೀಲಿಸಿದರು
ಹುಣಸೂರು ತಾಲ್ಲೂಕಿನ ಐಯ್ಯನಕೆರೆ ಹಾಡಿಯ ಬಾಲಕನನ್ನು ಕೊಂದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಮಹೇಶ್‌ ಕುಮಾರ್‌ ಅವರು ಅರಿವಳಿಕೆ ಮದ್ದು ನೀಡುವ ಬಂದೂಕನ್ನು ಪರಿಶೀಲಿಸಿದರು   

ಹುಣಸೂರು: ತಾಲ್ಲೂಕಿನ ಅಯ್ಯನಕೆರೆ ಹಾಡಿಯ ಬಾಲಕನನ್ನು ಕೊಂದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿನ ವಿವಿಧೆಡೆ 70 ಟ್ರ್ಯಾಪಿಂಗ್‌ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

‘ಈ ಹುಲಿ 3ರಿಂದ 4 ವರ್ಷ ಪ್ರಾಯದ್ದಾಗಿದೆ. ಹುಲಿ ಸೆರೆಗಾಗಿ ಗಣೇಶ್, ಭೀಮ ಮತ್ತು ಅರ್ಜುನ ಆನೆಗಳನ್ನು ಬಳಸಿ ಕೂಂಬಿಂಗ್ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆ 5ರಿಂದ 6 ಚದರ ಕಿ.ಮೀ ವ್ಯಾಪ್ತಿಯಲ್ಲಿ ನಡೆದಿದೆ. ಇಲಾಖೆಯ 50 ಸಿಬ್ಬಂದಿ ಸೇರಿದಂತೆ ಪಶು ವೈದ್ಯಾಧಿಕಾರಿಗಳ ತಂಡ ನಿತ್ಯ ಗಸ್ತು ನಡೆಸುತ್ತಿದೆ’ ಎಂದು ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದರು.

‘ಹಾಸನದಿಂದ ಅರಿವಳಿಕೆ ತಜ್ಞ ವೆಂಕಟೇಶ್ ಅವರನ್ನು ಕರೆಸಿಕೊಳ್ಳಲಾಗಿದೆ. ಕ್ಯಾಮೆರಾಗಳಲ್ಲಿ ಸೆರೆಯಾಗುವ ಚಿತ್ರಗಳನ್ನು ಆಧರಿಸಿ ಹುಲಿಯ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ’ ಎಂದರು.

ADVERTISEMENT

‘ವಯಸ್ಸಾದ ಪ್ರಾಣಿಗಳು ಕಾಡಂಚಿನ ಜನ ಮತ್ತು ಜಾನುವಾರುಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯ. ಅಂತಹ ಪ್ರಾಣಿಗಳನ್ನು ಸೆರೆ ಹಿಡಿದು ಮೈಸೂರು ಮೃಗಾಲಯದ ವನ್ಯಮೃಗ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸುವ ಆಲೋಚನೆ ಇದೆ’ ಎಂದು ತಿಳಿಸಿದರು.

ಪರಿಹಾರ: ಹುಲಿ ದಾಳಿಗೆ ಬಲಿಯಾದ ಗಣೇಶ್ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ₹7.50 ಲಕ್ಷ ಪರಿಹಾರ ನೀಡಲಾಗುವುದು. ಮೊದಲ ಹಂತದಲ್ಲಿ ₹2 ಲಕ್ಷ ಪರಿಹಾರ ಚೆಕ್‌ ಅನ್ನು ಶಾಸಕ ಎಚ್‌.ಪಿ.ಮಂಜುನಾಥ್ ಮೃತನ ಪೋಷಕರಿಗೆ ನೀಡಿದ್ದಾರೆ. ಉಳಿದ ಹಣವನ್ನು ಶೀಘ್ರದಲ್ಲೇ ನೀಡಲಾಗುವುದು’ ಎಂದು ಹೇಳಿದರು.

ನಾಲ್ಕು ಟ್ರ್ಯಾಪಿಂಗ್‌ ಕ್ಯಾಮೆರಾ ಕಳವು

ಹನಗೋಡು: ಬಾಲಕನನ್ನು ಕೊಂದ ಹುಲಿ ಪತ್ತೆಗಾಗಿ ಅರಣ್ಯದಲ್ಲಿ ಅಳವಡಿಸಿದ್ದ ನಾಲ್ಕು ಟ್ರ್ಯಾಪಿಂಗ್‌ ಕ್ಯಾಮೆರಾಗಳನ್ನು ಶುಕ್ರವಾರ ರಾತ್ರಿ ಕಳವು ಮಾಡಲಾಗಿದೆ.

ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಮೇಟಿಕುಪ್ಪೆ ಎಸಿಎಫ್ ಮಹದೇವ್, ಆರ್‌ಎಫ್‌ಒ ಹನುಮಂತರಾಜು ಈ ವಿಷಯವನ್ನು ತಿಳಿಸಿದರು.

‘ಕ್ಯಾಮೆರಾಗಳನ್ನು ಕಳವು ಮಾಡಿದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಬಾಲಕನನ್ನು ಕೊಂದ ಸ್ಥಳದಿಂದ 50 ಮೀ. ದೂರದಲ್ಲಿ ಅಳವಡಿಸಿದ್ದ ಕ್ಯಾಮೆರಾ ಸೇರಿದಂತೆ 7 ಕಡೆಗಳಲ್ಲಿ ಮೂರು ಹುಲಿಗಳ ಚಿತ್ರಗಳು ಸೆರೆಯಾಗಿವೆ. ಆದರೆ, ಘಟನೆ ನಡೆದ ದಿನ ಕಾಣಿಸಿಕೊಂಡಿದ್ದ ಹುಲಿಯ ಬೆನ್ನ ಮೇಲೆ ಗಾಯವಾಗಿತ್ತು. ಹೀಗಾಗಿ, ಇವು ಬೇರೆ ಹುಲಿಗಳಾಗಿವೆ’ ಎಂದರು.

‘ಶಿಂಡೇನಹಳ್ಳಿ ಗ್ರಾಮದ ಸುಜೇಂದ್ರ ಎಂಬಾತ ಜಿಂಕೆಯನ್ನು ಬೇಟೆಯಾಡಿದ್ದು, ಆತನನ್ನು ಬಂಧಿಸಲಾಗಿದೆ. 2 ಕೆ.ಜಿ. ಜಿಂಕೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಹಾಡಿ ಜನರು ಜಾನುವಾರುಗಳನ್ನು ಅರಣ್ಯಕ್ಕೆ ಬಿಡುತ್ತಿದ್ದಾರೆ. ಸೌದೆ ತರುವುದು, ಕಾಡಿನಲ್ಲಿ ಅಡ್ಡಾಡುವುದು ಸಾಮಾನ್ಯವಾಗಿದೆ. ಇದರಿಂದ ಹುಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ’ ಎಂದು ಎಸಿಎಫ್ ಸತೀಶ್‌ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.