ADVERTISEMENT

25ರಿಂದ ಸಿ.ಎ ನಿವೇಶನಕ್ಕೆ ಅರ್ಜಿ ಸಲ್ಲಿಕೆ; ಮುಡಾ ಅಧ್ಯಕ್ಷ ರಾಜೀವ್‌

300ಕ್ಕೂ ಅಧಿಕ ನಾಗರಿಕ ಸೌಕರ್ಯ ನಿವೇಶನ ಹಂಚಿಕೆ–ಮುಡಾ ಅಧ್ಯಕ್ಷ ರಾಜೀವ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 10:31 IST
Last Updated 18 ಸೆಪ್ಟೆಂಬರ್ 2021, 10:31 IST
ಎಚ್.ವಿ.ರಾಜೀವ್
ಎಚ್.ವಿ.ರಾಜೀವ್   

ಮೈಸೂರು: ಸಾರ್ವಜನಿಕರ ಉದ್ದೇಶಕ್ಕೆ ನಗರದ ವಿವಿಧ ಬಡಾವಣೆಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಂಚಿಕೆ ಮಾಡಲಿರುವ 300ಕ್ಕೂ ಅಧಿಕ ನಾಗರಿಕ ಸೌಕರ್ಯ ನಿವೇಶನ (ಸಿ.ಎ) ಕೋರಿ ಸೆ.25ರಿಂದ ಅ.30ರವರೆಗೆ ಸಂಘ, ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಅಧ್ಯಕ್ಷ ಎಚ್‌.ವಿ.ರಾಜೀವ್‌ ತಿಳಿಸಿದರು.

‘24 ಆದ್ಯತಾ ಕ್ಷೇತಗಳಿಗೆ ಸಿ.ಎ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಿದ್ದು, ಪ್ರತಿ ಚದರ ಮೀಟರ್‌ಗೆ ₹ 2,100 ನಿಗದಿಪಡಿಸಲಾಗಿದೆ. ಸೆ.23ರಿಂದ ಅ.22ರವರೆಗೆ ಪ್ರಾಧಿಕಾರದ ಸ್ಪಂದನ ಕೌಂಟರ್‌ನಲ್ಲಿ ಅರ್ಜಿ ಪಡೆದು ಅಲ್ಲಿಯೇ ಸಲ್ಲಿಸಬೇಕು. ಅರ್ಜಿಗೆ ₹ 1 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ನೋಂದಣಿಯಾದ ಸಹಕಾರ ಸಂಘಗಳು, ಶೈಕ್ಷಣಿಕ, ಧಾರ್ಮಿಕ ಉದ್ದೇಶಗಳಿಗಾಗಿ ಸ್ಥಾಪನೆಯಾದ ಸಂಘಗಳು ಮತ್ತು ಸರ್ಕಾರಿ ಇಲಾಖೆಗಳು, ಟ್ರಸ್ಟ್‌ಗಳು ನಿವೇಶನ ಪಡೆಯಲು ಅರ್ಹವಾಗಿವೆ’‌ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸರ್ಕಾರಿ ಇಲಾಖೆಗಳು, ಕನ್ನಡ ಮಾಧ್ಯಮ ಶಾಲೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಕ್ಷೇಮಾಭಿವೃದ್ಧಿಗೆ ಮೀಸಲಾಗಿರುವ ಸಂಸ್ಥೆಗಳಿಗೆ ನಿವೇಶನಗಳನ್ನು ಶೇ 50 ರಷ್ಟು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ ಸಂಸ್ಥೆಗಳಿಗೆ ಶೇ 18, ಪರಿಶಿಷ್ಟ ಪಂಗಡ ಸಂಸ್ಥೆಗಳಿಗೆ ಶೇ 3 ಹಾಗೂ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಗಳಿಗೆ ಶೇ 2 ರಷ್ಟು ನಿವೇಶನವನ್ನು ಮೀಸಲಾತಿಯಡಿ ಹಂಚಿಕೆ ಮಾಡಲಾಗುತ್ತದೆ’ ಎಂದರು.

ADVERTISEMENT

‘ಒಂದು ಅರ್ಜಿಯಲ್ಲೇ ಆದ್ಯತೆಯ ಮೇರೆಗೆ ಮೂರು ಸಿ.ಎ ನಿವೇಶನಗಳಿಗೆ ಕೋರಿಕೆ ಸಲ್ಲಿಸಬಹುದು. ಅವುಗಳ ಪೈಕಿ ಹೆಚ್ಚು ವಿಸ್ತೀರ್ಣದ ಸಿ.ಎ ನಿವೇಶನಕ್ಕೆ ಪ್ರಾರಂಭಿಕ ಠೇವಣಿ ಮತ್ತು ನೋಂದಣಿ ಶುಲ್ಕ ಮಾತ್ರ ಪಾವತಿಸಬೇಕಾಗಿರುತ್ತದೆ’ ಎಂದು ತಿಳಿಸಿದರು.

ಮನೆ ಸಮೀಕ್ಷೆ: ಗುಂಪು ಮನೆ ನಿರ್ಮಿಸಲು ಯೋಜನೆ ಹೊಂದಿದ್ದು, ಮನೆ ಬೇಡಿಕೆಯ ಸಮೀಕ್ಷೆಗಾಗಿ ಪ್ರಾಧಿಕಾರವು Mysuruuda ಆ್ಯಪ್‌ ರೂಪಿಸಿ ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ 580 ಮಂದಿ ಮಾಹಿತಿ ನೀಡಿದ್ದಾರೆ. 380 ಮಂದಿ ಅರ್ಜಿ ಸಲ್ಲಿಸಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ರಾಜೀವ್‌ ಮಾಹಿತಿ ನೀಡಿದರು.

‘ಬಹುಮಹಡಿ ಗುಂಪು ವಸತಿ ಯೋಜನೆಯಡಿ 1,980 ಮನೆಗಳ ನಿರ್ಮಾಣ ಮಾಡಲಾಗುವುದು. ರಾಮಕೃಷ್ಣ ವೃತ್ತ, ವಿಜಯನಗರ ಹಾಗೂ ಸಾತಗಳ್ಳಿಯಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಉದ್ದೇಶಿಸಿದ್ದೇವೆ. ಈ ಯೋಜನೆಯಡಿ ಮನೆಯನ್ನು ಖರೀದಿಸ ಬಯಸುವವರು ಆ್ಯಪ್‌ನಲ್ಲಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಬಹುದು’ ಎಂದರು.

ಮುಡಾ ಸದಸ್ಯರಾದ ಲಿಂಗಣ್ಣ, ನವೀನ್‌ ಕುಮಾರ್‌, ಮಹದೇಶ್‌, ಲಕ್ಷ್ಮಿ ಹಾಗೂ ಆಯುಕ್ತ ಡಿ.ಬಿ.ನಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.