ADVERTISEMENT

ದೇಗುಲ ಸಕ್ರಮಕ್ಕೆ ಪ್ರಯತ್ನ

ರಕ್ಷಣೆಗೆ ಮುಡಾ ಶಾಶ್ವತ ಕ್ರಮ: ರಾಜೀವ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 6:20 IST
Last Updated 16 ಸೆಪ್ಟೆಂಬರ್ 2021, 6:20 IST
ಎಚ್‌.ವಿ.ರಾಜೀವ್‌
ಎಚ್‌.ವಿ.ರಾಜೀವ್‌   

ಮೈಸೂರು: ‘ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಪಾಲಿಸಿ ದೇವಾಲಯಗಳ ರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬದ್ಧವಾಗಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎಚ್‌.ವಿ.ರಾಜೀವ್‌ ಎಂದು ತಿಳಿಸಿದ್ದಾರೆ.

‘ಸರ್ಕಾರಿ ಜಾಗದಲ್ಲಿರುವ, ಅನುಮತಿ ಪಡೆಯದೆ ನಿರ್ಮಿಸಿರುವ ಹಾಗೂ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುವ ಧಾರ್ಮಿಕ ಕೇಂದ್ರಗಳನ್ನು ಸಕ್ರಮ ಮಾಡಲು ಮೊದಲು ಅವಕಾಶ ನೀಡಿ ಎಂದು ನ್ಯಾಯಾಲಯ ಹೇಳಿದೆ. ಸಕ್ರಮ ಮಾಡಲು ಅಥವಾ ಬೇರೆಸ್ಥಳಗಳಿಗೆ ಸ್ಥಳಾಂತರ ಮಾಡಲು ಆಗದಿದ್ದರೆ ಮಾತ್ರ ತೆರವುಗೊಳಿಸಲು ತಿಳಿಸಿದೆ’ ಎಂದಿದ್ದಾರೆ.

‘ಮುಡಾ ಹಾಗೂ ನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 92 ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಅವುಗಳ ಕುರಿತು ತೀರ್ಮಾನ ಆಗುವ ತನಕ ಹಾಗೂ ತಮ್ಮ ಗಮನಕ್ಕೆ ತರದೆ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಈಗಾಗಲೇ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

‘ಉದ್ಯಾನಗಳಲ್ಲಿನ ಧಾರ್ಮಿಕ ಕಟ್ಟಡಗಳಿರುವ ಸ್ಥಳವನ್ನು ಸಿಎ ನಿವೇಶನವನ್ನಾಗಿ ಪರಿವರ್ತಿಸಲಾಗುವುದು. ಅಷ್ಟೇ ವಿಸ್ತೀರ್ಣದಲ್ಲಿ ಬೇರೆ ಸಿಎ ಸ್ಥಳದಲ್ಲಿ, ಉದ್ಯಾನ ನಿರ್ಮಿಸಲಾಗುವುದು. ಅದರಿಂದ ಧಾರ್ಮಿಕ ಕೇಂದ್ರ ಸಕ್ರಮವಾದಂತೆ ಆಗುತ್ತದೆ. ಸಿ.ಎ ನಿವೇಶನವನ್ನಾಗಿ ಪರಿರ್ವತಿಸಲು ಆಗದಿದ್ದರೆ ಸ್ಥಳಾಂತರಿಸಲು ಪ್ರಯತ್ನಿಸಲಾಗುವುದು’ ಎಂದಿದ್ದಾರೆ.

‘ಆ ರೀತಿ ಪರಿವರ್ತಿಸುವಾಗ ಜಾಗಕ್ಕೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಆದರೆ, ಶುಲ್ಕ ಪಾವತಿಸಲು ಕೆಲವರಿಗೆ ಕಷ್ಟವಾಗುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಧಾರ್ಮಿಕ ಕೇಂದ್ರಗಳಿಗೆ ಬಳಸುವ ನಿವೇಶನ
ಗಳನ್ನು ಪ್ರಾಧಿಕಾರ ನಿಗದಿ ಪಡಿಸಿರುವ ಮೊತ್ತದ ಶೇ 25ಕ್ಕೆ ಕೊಡಲು ಅವಕಾಶ ಕಲ್ಪಿಸಲು ಕೋರಲಾಗಿದ್ದು, ಸಮಸ್ಯೆ ಪರಿಹಾರವಾಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.