ADVERTISEMENT

ಜನರನ್ನು ಮೋಸದಿಂದ ಮತಾಂತರ ಮಾಡುವವರನ್ನು ಮಟ್ಟ ಹಾಕುತ್ತೇವೆ: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 9:24 IST
Last Updated 24 ಸೆಪ್ಟೆಂಬರ್ 2021, 9:24 IST
 ಸಂಸದ ಪ್ರತಾಪ ಸಿಂಹ
ಸಂಸದ ಪ್ರತಾಪ ಸಿಂಹ   

ಮೈಸೂರು: ‘ಜನರನ್ನು ಮೋಸದಿಂದ ಮತಾಂತರ ಮಾಡುವವರನ್ನು ಮಟ್ಟ ಹಾಕುತ್ತೇವೆ. ಎಲ್ಲೇ ಆಗಲಿ, ಆಮಿಷದ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಸಂಸದ ಪ್ರತಾಪ ಸಿಂಹ ಕಿಡಿಕಾರಿದರು.

ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿ, ‘ತಮ್ಮ ತಾಯಿ ಮೋಸದ ಜಾಲಕ್ಕೆ ಸಿಲುಕಿ ಮತಾಂತರಗೊಂಡ ಬಗ್ಗೆ ಶಾಸಕ ಗೂಳಿಹಟ್ಟಿ ಶೇಖರ್‌ ವಿಧಾನಸಭೆಯಲ್ಲಿ ನೋವು ತೋಡಿಕೊಂಡಿದ್ದಾರೆ. ಕ್ರೈಸ್ತ ಮಿಷನರಿಗಳು ಆಮಿಷವೊಡ್ಡಿ ಮತಾಂತರದ ಕೆಲಸ ಮಾಡುತ್ತಿವೆ. ಇದಕ್ಕೆ ತಡೆಯೊಡ್ಡಲು ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು’ ಎಂದು ಆಗ್ರಹಿಸಿದರು.

‘ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಡಿ ಎಂದು ಬಿಷಪ್‌ಗಳು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ನೀವು ಮತಾಂತರದಲ್ಲಿ ತೊಡಗಿಲ್ಲ ಎಂದಾದರೆ ಕಾಯ್ದೆಯ ಬಗ್ಗೆ ಭಯ ಏಕೆ, ಬಾಲ ಸುಟ್ಟ ಬೆಕ್ಕಿನ ತರ ಚಡಪಡಿಕೆ ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ವಿದ್ಯಾವಂತರು, ತಿಳಿವಳಿಕೆ ಉಳ್ಳವರನ್ನು ಮರುಳು ಮಾಡಿ ಮತಾಂತರ ಮಾಡಲು ನಿಮಗೆ ಆಗುತ್ತಿಲ್ಲ. ಬಡವರು, ಅನಕ್ಷರಸ್ಥರನ್ನು ಹುಡುಕಿಕೊಂಡು ಕೇರಿಗಳು, ಸಣ್ಣಪುಟ್ಟ ಕಾಲೊನಿಗಳಿಗೆ ಹೋಗುತ್ತೀರಿ. ಮತಾಂತರ ನಿಷೇಧ ಕಾಯ್ದೆಯಿಂದ ಬಿಷಪ್‌ಗಳಿಗೆ ಏಕೆ ನೋವಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ’ ಎಂದರು.

‘ಹಿಂದೂ ಧರ್ಮ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟಿದೆ. ಕ್ರೈಸ್ತರು ಮತ್ತು ಇಸ್ಲಾಂನಲ್ಲಿ ಕೆಲವರು ಸಂಖ್ಯಾಬಲದಲ್ಲಿ ನಂಬಿಕೆಯಿಟ್ಟಿದ್ದಾರೆ. ನಾವು ಯಾರ ಮೇಲೂ ಆಕ್ರಮಣ ಮಾಡುವುದಿಲ್ಲ. ಆದರೆ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಹಿಂದೂ ಧರ್ಮವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಸಂಖ್ಯಾಬಲ ಹೆಚ್ಚಿಸಲು ಬಯಸುವವರು ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಾರೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.