ADVERTISEMENT

ದಯಾಮರಣಕ್ಕೆ ದಂಪತಿ ಅರ್ಜಿ: ಕೃಷಿ ಭೂಮಿಯಲ್ಲಿ ರಸ್ತೆ ನಿರ್ಮಿಸಲು ಒತ್ತಡ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 6:40 IST
Last Updated 16 ಸೆಪ್ಟೆಂಬರ್ 2021, 6:40 IST
ಹುಣಸೂರು ನಗರದ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಅವರಿಗೆ ಕೋಣನಹೊಸಹಳ್ಳಿ ರೈತ ದಂಪತಿ ಲಕ್ಷ್ಮಿ ಮತ್ತು ರಾಜು ಮನವಿ ಸಲ್ಲಿಸಿದರು
ಹುಣಸೂರು ನಗರದ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಅವರಿಗೆ ಕೋಣನಹೊಸಹಳ್ಳಿ ರೈತ ದಂಪತಿ ಲಕ್ಷ್ಮಿ ಮತ್ತು ರಾಜು ಮನವಿ ಸಲ್ಲಿಸಿದರು   

ಹುಣಸೂರು: ‘ಅನುಭೋಗದಲ್ಲಿರುವ ಕೃಷಿ ಭೂಮಿಯಲ್ಲಿ ರಸ್ತೆ ನಿರ್ಮಿಸುವಂತೆ ನೆರೆಯವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ, ಇಲ್ಲವೇ ದಯಾಮರಣಕ್ಕೆ ಒಪ್ಪಿಗೆ ಕೊಡಿ’ ಎಂದು ತಾಲ್ಲೂಕಿನ ಕೋಣನಹೊಸಹಳ್ಳಿಯ ಲಕ್ಷ್ಮಿ ಮತ್ತು ರಾಜು ದಂಪತಿ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘ಗ್ರಾಮದ ಸರ್ವೆ ನಂ. 23ರ 5 ಎಕರೆಯಲ್ಲಿ 40 ವರ್ಷದಿಂದಸಾಗುವಳಿ ಮಾಡುತ್ತಿದ್ದೇವೆ. ನೆರೆಯ ಜಮೀನಿನ ಮಾಲೀಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಟ್ಟನಾಯಕ ಅವರು ಜಮೀನಿನಲ್ಲಿ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಸಂಬಂಧ ಪಂಚಾಯಿತಿ ಮತ್ತು ಪೊಲೀಸ್‌ ಠಾಣೆಗೆ ದೂರು ನೀಡಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ರಾಜು ಆರೋಪಿಸಿದರು.

‘ಕಟ್ಟನಾಯಕ ಅವರ ಕಿರುಕುಳ ಸಹಿಸಲಾಗದೆ 2021ರ ಜನವರಿಯಲ್ಲಿ ದಯಾಮರಣ ಕೋರಿಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ ಮೇಲೆ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸರ್ವೆ ನಡೆಸಿ, ರಸ್ತೆ ಇಲ್ಲ ಎಂದು ವರದಿ ಸಲ್ಲಿಸಿದ್ದರು. ಈ ನಡುವೆ ಲೋಕೋಪಯೋಗಿ ಇಲಾಖೆ ₹1.90 ಕೋಟಿ ವೆಚ್ಚದಲ್ಲಿ ಕಟ್ಟನಾಯಕ ಜಮೀನು ಸಂಪರ್ಕಿಸುವ 40 ಅಡಿ ರಸ್ತೆ ಕಾಮಗಾರಿ ನಡೆಸಿ ಡಾಂಬರು ಹಾಕಿದೆ. ಹೀಗಿದ್ದರೂ ಕಿರುಕುಳ ತಪ್ಪಿಲ್ಲ’ ಎಂದು ಹೇಳಿದರು.

ADVERTISEMENT

‘ಸ್ಥಳಕ್ಕೆ ತಹಶೀಲ್ದಾರ್‌ರೊಂದಿಗೆಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದು ವರ್ಣಿತ್ ನೇಗಿ ತಿಳಿಸಿದರು. ಸತ್ಯಾ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮತ್ತು ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.