ADVERTISEMENT

ಆರೋಪಿಗಳ ಬಂಧನಕ್ಕೆ ವಾರದ ಗಡುವು

ಠಾಣಾ ವ್ಯಾಪ್ತಿಗಳಲ್ಲಿ ಶಾಂತಿಸಭೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:31 IST
Last Updated 17 ಸೆಪ್ಟೆಂಬರ್ 2021, 4:31 IST

ಮೈಸೂರು: ಪತ್ರಕರ್ತ ಮಹಮ್ಮದ್ ಸಫ್ಜರ್ ಕೈಸರ್ ಮೇಲೆ ನಡೆದ ಹಲ್ಲೆ ಪ್ರಕರಣಗಳ ಆರೋಪಿಗಳನ್ನು ಒಂದು ವಾರದಲ್ಲಿ ಬಂಧಿಸಬೇಕು ಹಾಗೂ ಇಂತಹ ಘಟನೆ ಮತ್ತೆ ಮರುಕಳಿಸದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಮೀಯತೆ ಉಲೆಮಾ ಎ ಹಿಂದ್ ನೇತೃತ್ವದ ಸಭೆಯು ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿತು.

ಉದಯಗಿರಿಯ ಸಫಾ ಫಂಕ್ಷನ್ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ 10ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಿದ್ದವು. ಸುಮಾರು 150ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಎಲ್ಲರೂ ಘಟನೆಯನ್ನು ಬಲವಾಗಿ ಖಂಡಿಸಿದರು.

ಗುರುತಿನ ಚೀಟಿ ತೋರಿಸಬೇಕು ಎಂಬುದು ನೆಪಮಾತ್ರ. ಉರ್ದು ಮಾತನಾಡಿದರು ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದವು. ಈ ವಿಷಯವನ್ನು ಶಾಸಕ ತನ್ವೀರ್‌ಸೇಠ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಕು ಎಂದು ಆಗ್ರಹಿಸಲಾಯಿತು.

ADVERTISEMENT

ಮುಖಂಡರಾದ ತಾಜುದ್ದೀನ್, ಮೌಲಾನ ಜಕಾವುಲ್ಲಾ, ಮೌಲಾನ ಅಕ್ಬರ್ ಷರೀಫ್, ಮೌಲಾನ ಅಯೂಬ್‌ ಅನ್ಸಾರಿ, ಪಾಲಿಕೆ ಸದಸ್ಯರಾದ ಆರಿಫ್‌ಹುಸೇನ್, ಬಷೀರ್, ಹಸ್ರತ್, ಅಯೂಬ್‌ಖಾನ್, ಮುಖಂಡ ಶೌಕತ್‌ಪಾಷಾ ಇದ್ದರು.

ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿ ಸಭೆ: ಹಿಂದೂ ಜಾಗರಣ ವೇದಿಕೆಯ ಪ್ರತಿಭಟನಾ ಸಭೆಯ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ‘ದಿ ಡೈಲಿ ಕೌಸರ್’ ದಿನಪತ್ರಿಕೆಯ ವರದಿಗಾರ ಮಹಮ್ಮದ್ ಸಫ್ಜರ್ ಕೈಸರ್ ಉರ್ದು ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ಹರಡಿದ್ದು, ಈ ಕುರಿತು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ಶಾಂತಿ ಸಭೆ ನಡೆಸಿದರು.

ದೇವರಾಜ, ಲಷ್ಕರ್, ಮಂಡಿ, ಉದಯಗಿರಿ, ನರಸಿಂಹರಾಜ ಠಾಣಾ ವ್ಯಾಪ್ತಿಗಳಲ್ಲಿ ಶಾಂತಿ ಸಭೆಗಳು ನಡೆದರೆ, ಡಿಸಿಪಿ ಪ್ರದೀಪ್‌ಗುಂಟಿ ಅವರು ತಮ್ಮ ಕಚೇರಿಯಲ್ಲೂ ಶಾಂತಿಸಭೆ ನಡೆಸಿದರು. ಉರ್ದು ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಹಲ್ಲೆ ನಡೆದಿಲ್ಲ. ಗುರುತಿನ ಚೀಟಿ ತೋರಿಸದ ಕಾರಣಕ್ಕೆ ಕೆಲವರು ಹಲ್ಲೆ ನಡೆಸಿದರು ಎಂದು ಮುಖಂಡರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

ಹಲ್ಲೆ ಖಂಡಿಸಿ ಎಸ್‌ಡಿಪಿಐ ಕಾರ್ಯಕರ್ತರು ಫೌಂಟೇನ್ ವೃತ್ತದ ಸಮೀಪ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.