ADVERTISEMENT

ಉಚ್ಚಗಣಿ ದೇವಾಲಯ ಪುನರ್‌ನಿರ್ಮಾಣಕ್ಕೆ ಆರ್.ಧ್ರುವನಾರಾಯಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 6:39 IST
Last Updated 16 ಸೆಪ್ಟೆಂಬರ್ 2021, 6:39 IST
ಉಚ್ಚಗಣಿ ಗ್ರಾಮಕ್ಕೆ ಆರ್.ಧ್ರುವನಾರಾಯಣ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು
ಉಚ್ಚಗಣಿ ಗ್ರಾಮಕ್ಕೆ ಆರ್.ಧ್ರುವನಾರಾಯಣ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು   

ನಂಜನಗೂಡು: ‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಿಂದ ಅಧಿಕಾರಿಗಳು ಉಚ್ಚಗಣಿ ದೇವಾಲಯ ಕೆಡವಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದ್ದು, ದೇವಾಲಯವನ್ನು ಪುನರ್‌ನಿರ್ಮಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆಗ್ರಹಿಸಿದರು.

ತಾಲ್ಲೂಕಿನ ಉಚ್ಚಗಣಿ ಗ್ರಾಮದ ಮಹದೇವಮ್ಮ ದೇವಾಲಯವನ್ನು ನೆಲಸಮಗೊಳಿಸಿರುವ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

‘ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಅನಧಿಕೃತ ದೇಗುಲಗಳನ್ನು ತೆರವು ಮಾಡಬೇಕೆಂದು ಆದೇಶ ಹೊರಡಿಸಿದ್ದರು. ಅದರಂತೆ ಅಧಿಕಾರಿ ಗಳು ತೆರವಿಗೆ ಮುಂದಾಗಿದ್ದಾರೆ. ಇದೀಗ ತೆರವು ಮಾಡಿದ್ದನ್ನು ಬಿಜೆಪಿ ನಾಯಕರೇ ವಿರೋಧಿಸುತ್ತಿದ್ದಾರೆ. ದೇವಾಲಯ ನೆಲಸಮಗೊಳಿಸುವ, ಮತ್ತೆ ಕಟ್ಟುವುದರಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ದೇಶದಲ್ಲಿ ಧರ್ಮ ಆಧಾರಿತ ರಾಜಕಾರಣ ಮಾಡ ಬಾರದು’ ಎಂದು ಸಲಹೆ ನೀಡಿದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಇಂಥ ಘಟನೆ ನಡೆದಿದ್ದರೆ ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಮುಂತಾದ ಬಿಜೆಪಿ ನಾಯಕರು ಮತ್ತೊಂದು ದತ್ತಪೀಠ ಮಾದರಿಯಲ್ಲಿ ಹೋರಾಟ ರೂಪಿಸಿ ಬಿಡುತ್ತಿದ್ದರು. ಬಿಜೆಪಿ ನಾಯಕರು ಬಾಯಲ್ಲಿ ಮಂತ್ರ ಜಪ ಹೇಳುತ್ತಾರೆ ಅಷ್ಟೆ. ಅಧಿಕಾರಕ್ಕೆ ಬಂದಾಗ ಎಲ್ಲವನ್ನೂ ಮರೆಯುತ್ತಾರೆ. ಹಿಂದೂಪರ ಸಂಘಟನೆಗಳು ಅಧಿಕಾರಿಗಳ ಬದಲು ಆಡಳಿತಾರೂಢ ಸರ್ಕಾರದ ವಿರುದ್ಧ ಪ್ರತಿಭಟಿಸಲಿ’ ಎಂದು ಸವಾಲು ಹಾಕಿದರು.

ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಮಾತನಾಡಿ, ‘ಗ್ರಾಮಸ್ಥರು ದೇಗುಲದ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಬೇಕು. ದಾನಿಗಳು ದೇವಾಲಯಕ್ಕೆ ನೀಡುವ ಜಾಗವನ್ನು ಟ್ರಸ್ಟ್ ಹೆಸರಿಗೆ ನೋಂದಾಯಿಸಬೇಕು’ ಎಂದು ಸಲಹೆ ನೀಡಿದರು.

ಕೆಪಿಸಿಸಿ ವೀಕ್ಷಕ ಸೋಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ನರಸಿಂಹೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.